ಕೊರೊನಾ 3ನೇ ಅಲೆ ಬರ್ತಿದೆ, ನೀವು ಉಳಿತಿರೋ ಇಲ್ಲವೋ ನಾನಂತೂ ಉಳೀಬೇಕು

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಉಮೇಶ ಕತ್ತಿ

 

ಬಾಗಲಕೋಟೆ: ಕೋವಿಡ್ ಮೂರನೇ ಅಲೆ ಬರುತ್ತಿದೆ. ನೀವು ಉಳಿಯುತ್ತಿರೋ ಇಲ್ಲವೋ ಗೊತ್ತಿಲ್ಲ ಆದರೆ ನಾನಂತು ಉಳಿಯಬೇಕು ಎನ್ನುವ ಮೂಲಕ ಸಚಿವ ಉಮೇಶ ಕತ್ತಿ ಮತ್ತೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಹಾಗೂ ಖಾಸಗಿ ವೈದ್ಯರ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ರಬಕವಿಯ ಖಾಸಗಿ ವೈದ್ಯ ರವಿ ಜಮಖಂಡಿ ಎಂಬುವವರು ಮಾತನಾಡುತ್ತಿದ್ದ ವೇಳೆ ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ಸಹ ಸರಕಾರ ಹೆಚ್ಚು ನೀಡಬೇಕು ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು ಆಗ ಸಚಿವರು ಮೂರನೇ ಅಲೆ ಬಂದ ಮೇಲೆ ನೋಡೋಣ ಎಂದರು. ಆಗ ವೈದ್ಯರು ಆವಾಗ ನಾವು ಉಳಿದರೆ ನೋಡೋಣ ಎಂದಾಗ ಸಚಿವರು ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ.

ಇನ್ನು ಮಹಲಿಂಗಪುರ, ಜಮಖಂಡಿ, ತೇರದಾಳ, ಮುಧೋಳ ಸೇರಿದಂತೆ ಮುಂತಾದ ಕಡೆಗಳಲ್ಲಿಯೂ ಅಧಿಕಾರಿಗಳೊಂದಿಗೆ ಸಚಿವ ಉಮೇಶ ಕತ್ತಿ ಸಭೆ ನಡೆಸಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ವೇಳೆ ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಎಂಎಲ್‍ಸಿ ಹಣಮಂತ ನಿರಾಣಿ, ಡಿಸಿ, ಎಸ್‍ಪಿ, ಜಿ.ಪಂ.ಸಿಇಓ ಸೇರಿದಂತೆ ಹಲವು ಅಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು. ಒಟ್ಟಾರೆ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಕತ್ತಿ ಸಾಹುಕಾರ್‍ಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಈ ರೀತಿ ಉದ್ಧಟತನದಿಂದ ಮಾತನಾಡುತ್ತಿದ್ದಾರೆ ಎಂಬ ಟೀಕೆ ಕೂಡ ಕೇಳಿ ಬಂದಿದೆ.