ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅಮೆರಿಕ ರಾಯಭಾರ ಕಚೇರಿ

ಕನ್ನಡದಲ್ಲೇ ಟ್ವೀಟ್ ಮಾಡಿ ಕಂಬನಿ ಮಿಡಿದ ಅಮೆರಿಕ ರಾಯಭಾರ ಕಚೇರಿ

 

ಬೆಂಗಳೂರು: ಬೈಕ್ ಅಪಘಾತದಲ್ಲಿ ದುರಂತ ಅಂತ್ಯಕ್ಕೀಡಾದ ಖ್ಯಾತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅಮೆರಿಕ ರಾಯಭಾರ ಕಚೇರಿಯೂ ಸಹ ಸಂತಾಪ ವ್ಯಕ್ತಪಡಿಸಿದೆ.

ಈ ಬಗ್ಗೆ ವಿಶೇಷವಾಗಿ ಕನ್ನಡಲ್ಲಿಯೇ ಟ್ವೀಟ್ ಮಾಡಿರುವ ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ #Pride ತಿಂಗಳ ಆಚರಣೆಯ ಅಂಗವಾಗಿ LGBTQi+ (ಲೈಂಗಿಕ ಅಲ್ಪಸಂಖ್ಯಾತರು) ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ 'ನಾನು ಅವನಲ್ಲ… ಅವಳು' ಪ್ರದರ್ಶನ-ಸಂವಾದದಲ್ಲಿ ಭಾಗಿಯಾಗಿದ್ದ ಸಂಚಾರಿ ವಿಜಯ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದೆ.

ಅಮೆರಿಕ ರಾಯಭಾರ ಕಚೇರಿಯ ಈ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಕನ್ನಡದ ನಟನಿಗೆ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

">ರಾಷ್ಟ್ರ ಪ್ರಶಸ್ತಿ ವಿಜೇತ #SanchariVijay ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ #Pride ತಿಂಗಳ ಆಚರಣೆಯ ಅಂಗವಾಗಿ LGBTQi+ ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ “ನಾನು ಅವನಲ್ಲ…ಅವಳು” ಪ್ರದರ್ಶನ-ಸಂವಾದದಲ್ಲಿ ಭಾಗಿಯಾಗಿದ್ದ ಸಂಚಾರಿ ವಿಜಯ್‌. #RIP

— US Consulate Chennai (@USAndChennai) June 15, 2021

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ವಿಜಯ್ ಅವರ ಸ್ವಗ್ರಾಮವಾಗಿದ್ದು, ಪಂಚನಹಳ್ಳಯಲ್ಲಿ ಸಕಲ ಸರ್ಕಾರ ಗೌರವಗಳೊಂದಿಗೆ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅವರ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.