ರಾಜಪ್ರಭುತ್ವದ ದೇಶಗಳಲ್ಲೂ ಪತ್ರಿಕಾ ಸ್ವಾತಂತ್ರ್ಯದ ಹರಣ ಈ ರೀತಿ ಆಗಿರಲಿಕ್ಕಿಲ್ಲ...
ಭಾರತ್ ಜೋಡೋ ಯಾತ್ರೆಯನ್ನು ಮೊದಲ ದಿನದಿಂದ ಕೊನೆಯ ದಿನದ ವರೆಗೆ ವರದಿ ಮಾಡಿದ್ದ ಇಂಡಿಯಾ ಟುಡೇ ವಾಹಿನಿಯ ಸುಪ್ರಿಯಾ ಭಾರದ್ವಜ್ ಕೆಲ ತಿಂಗಳ ಹಿಂದೆ ತಮ್ಮ ಮಾಧ್ಯಮ ಸಂಸ್ಥೆಗೆ ರಾಜೀನಾಮೆ ನೀಡಿದ್ದರು. ರಾಹುಲ್ ಗಾಂಧಿಯವರ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ, ಅಲ್ಲಿ ಅಗತ್ಯವಿಲ್ಲದ ಪ್ರಶ್ನೆಗಳನ್ನು ಕೇಳಿ, ಪತ್ರಿಕಾಗೋಷ್ಟಿಯ ಉದ್ದೇಶವನ್ನು ಬದಲಾಯಿಸಲು ಆಕೆಯ ಸಂಪಾದಕರಿಂದ ಆಕೆಗೆ ಆದೇಶ ಬಂದಿತ್ತು. ತಾನು ಮಾಧ್ಯಮ ವೃತ್ತಿಗೆ ದ್ರೋಹ ಬಗೆಯಲಾರೆ ಎನ್ನುತ್ತಾ ಆಕೆ ರಾಜೀನಾಮೆ ನೀಡಿ ಹೊರಬಂದಿದ್ದರು.
ಇದೀಗ ಅದಾನಿ ನೇತ್ರತ್ವದ ಎನ್‍ಡಿಟಿವಿಯ ಮುಂಬಯಿ ಬ್ಯೂರೋ ಚೀಪ್ ಸೋಹಿತ್ ಮಿಶ್ರಾ ಇಂಥಹದ್ದೇ ಕಾರಣ ಕೊಟ್ಟು ಎನ್‍ಡಿಟಿವಿಗೆ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ. ಆಗಸ್ಟ್ 31 ರಂದು ಅದಾನಿಯ ಶೆಲ್ ಕಂಪನಿಗಳು ಹಾಗೂ ತಾಲೀಬಾನ್ ನಡುವಿನ ರಹಸ್ಯ ಸಂಬಂಧದ ಬಗ್ಗೆ ರಾಹುಲ್ ಗಾಂಧಿ ಮುಂಬಯಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ ಸೋಹಿತ್‍ಗೆ, ಪತ್ರಿಕಾಗೋಷ್ಟಿಯಲ್ಲಿ ರಾಹುಲ್ ಗಾಂಧಿ ಅದಾನಿ ಬಗ್ಗೆ ಮಾತಾನಾಡದಂತೆ, ಅವರಿಗೆ ಪ್ರಚೋದನಾಕಾರಿ ಪ್ರಶ್ನೆಗಳನ್ನು ಕೇಳಿ, ಪತ್ರಿಕಾಗೋಷ್ಟಿಯಲ್ಲಿ ಕೋಲಾಹಲ ಎಬ್ಬಿಸುವಂತೆ ಎನ್‍ಡಿಟಿವಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯ ಆದೇಶಿಸಿದ್ದರಂತೆ. ಸೋಹಿತ್ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದರೂ, ಸಂಪಾದಕರು ಹೇಳಿದ್ದನ್ನು ಮಾಡದೇ, ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಎನ್‍ಡಿಟಿವಿಯಿಂದ ಹೊರನಡೆದಿದ್ದಾರೆ.
ದೊಡ್ಡ ಮಾಧ್ಯಮ ಸಂಸ್ಥೆಗಳು, ಅದರ ಮ್ಹಾಲಕರು, ಸಿಬ್ಬಂದಿ, ಪತ್ರಕರ್ತರು ಇವತ್ತಿನ ಆಡಳಿತ ವರ್ಗದೆದುರು ಬೆನ್ನುಮೂಳೆ ಕಳೆದುಕೊಂಡು ಉರುಳುಸೇವೆ ಮಾಡುತ್ತಿರುವಾಗ, ಅಲ್ಲೊಬ್ಬರು, ಇಲ್ಲೊಬ್ಬರು ಎನ್ನುವಂತೆ ಕೆಲ ಪತ್ರಕರ್ತರು ತಮಗೆ ಇನ್ನೂ ಬೆನ್ನುಮೂಳೆ ಇದೆ ಹಾಗಾಗಿ ಸರ್ಕಾರ ಎಸೆದ ಮೂಳೆಗಳನ್ನು ಜಗಿಯುವುದಿಲ್ಲ, ಅವರ ಪಾದಸೇವೆ ಮಾಡಲ್ಲ ಎಂದು ಹೇಳಿ ತಮ್ಮ ಮಾಧ್ಯಮ ವೃತ್ತಿಗೆ ಗೌರವ ತರುತ್ತಿದ್ದಾರೆ. ಅವರ ದನಿ ಇವತ್ತು ಕ್ಷೀಣವಾಗಿದ್ದರೂ, ಮುಂದೊಂದು ದಿನ ಅವರ ಜೊತೆ ಇನ್ನೂ ಹಲವಾರು ಮಂದಿ ನಿಲ್ಲುವರು ಎಂಬ ಆಶಾವಾದ ಇನ್ನೂ ಜೀವಂತವಿದೆ..