ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುತ್ತಿದೆ

ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ

 

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೆಟ್ರೋಲ್ ದರ ಏರಿಕೆ ಆಗುತ್ತಿದೆ. 35 ರೂಪಾಯಿಗೆ ಪೆಟ್ರೋಲ್ ನೀಡಬೇಕಾದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಇದರಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಜನ ಕೊರೋನಾದಿಂದ ಕಂಗೆಟ್ಟಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಎಲ್​ಪಿಜಿ ಮತ್ತು ವಿದ್ಯುತ್​ ದರವನ್ನು ಹೆಚ್ಚಿಸುತ್ತಲೇ ಇದೆ. ಕರ್ನಾಟಕದಲ್ಲೂ ಪೆಟ್ರೋಲ್ ಬೆಲೆ 100 ರೂಪಾಯಿಯ ಗಡಿ ದಾಟಿದೆ, ಡೀಸೆಲ್ ಬೆಲೆಯೂ ಶತಕ ಬಾರಿಸುವ ಸಾಧ್ಯತೆಯಿದೆ. ಪೆಟ್ರೋಲ್​-ಡೀಸೆಲ್ ಬೆಲೆ ಏರಿಕೆಯಿಂದ ದಿನನಿತ್ಯ ಬಳಕೆಯ ವಸ್ತುಗಳ ಬೆಲಯೂ ಏರುತ್ತಲೇ ಇದೆ ಎಂದು ತಿಳಿಸಿದರು.

ಲಾಕ್ ಡೌನ್ ಸಂದರ್ಭ ಪ್ರತಿ ಕುಟುಂಬಕ್ಕೆ ಎರಡು ತಿಂಗಳ 10 ಸಾವಿರ ಕೊಡಿ ಅಂತ ಹೇಳಿದ್ದೆ. ಈಗ ಸರ್ಕಾರ ಕೊಡುವ 2 ಸಾವಿರದಿಂದ ಬದುಕೋಕೆ ಆಗುತ್ತಾ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಕೊಡುವ ಅಕ್ಕಿಯನ್ನು ಯಡಿಯೂರಪ್ಪ ಫೋಟೋ ಹಾಕಿಕೊಂಡು ಜನರಿಗೆ ಕೊಡುತ್ತಿದ್ದಾರೆ. ಇದು ಸರಿಯಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಚರ್ಚೆ ನಡೆಸಲು 15‌ ದಿನದ ಒಳಗೆ ವಿಧಾನಸಭೆ ಕಲಾಪ ಕರೆಯಬೇಕು. ಇಲ್ಲ‌ದಿದ್ದರೆ ಜೆಡಿಎಸ್​ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದ ಎಚ್ಚರಿಕೆ ನೀಡಿದ್ದಾರೆ.