ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸಲು ಸರ್ಕಾರ ಚಿಂತನೆ: ಆರ್.ಅಶೋಕ್

ಸೋಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಲಾಕ್ ಡೌನ್ ಮುಂದುವರೆಯಲಿದೆ

 

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಒಂದು ದಿನಕ್ಕೆ 1 ಸಾವಿರಕ್ಕಿಂತಲೂ ಕಡಿಮೆಯಾದಾಗ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಜೂನ್ 7ರಿಂದ ನಿರ್ಬಂಧ ತೆರವು ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಂದು ಕ್ಷೇತ್ರದ ನಂತರ ಮತ್ತೊಂದು ಕ್ಷೇತ್ರವನ್ನು ಲಾಕ್ ಡೌನ್ ನಿಂದ ಮುಕ್ತಗೊಳಿಸುವ ಮೂಲಕ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ನನ್ನ ಅಭಿಪ್ರಾಯ ತಿಳಿಸಿರುವುದಾಗಿ ತಿಳಿದ್ದಾರೆ.

ರಾಜ್ಯದಲ್ಲಿ ಹಂತ ಹಂತವಾಗಿ ಕೋವಿಡ್ ನಿರ್ಬಂಧ ಸಡಿಲಗೊಳಿಸಲು ಕೆಲ ಕ್ಷೇತ್ರಗಳಿಂದ ಮನವಿ ಬಂದಿದೆ. ಆದಾಗ್ಯೂ, ಸೋಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಲಾಕ್ ಡೌನ್ ಮುಂದುವರೆಯಲಿದೆ. ಸೋಂಕು ಕಡಿಮೆಯಾದಾಗ ಮಾತ್ರ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಜೂನ್ 6ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆನಂತರವಷ್ಟೇ ಲಾಕ್ ಡೌನ್ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ಜನರ ಹಿತಾಸಕ್ತಿಗನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶೋಕ್ ತಿಳಿಸಿದ್ದಾರೆ.