ದೇಶದಲ್ಲಿ 1.20 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ, 3,380 ಸಾವು

ಇಳಿಮುಖವಾಗುತ್ತಿದೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ

 

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 1,20,529 ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಹಾಗೆ ಕೋವಿಡ್ ಸೋಂಕಿನಿಂದ 3,380 ಮಂದಿ ಮೃತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೋನಾ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 1,97,894 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 15.55 ಲಕ್ಷ ಇವೆ.

ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಸಂಖ್ಯೆ 3,44,082ಕ್ಕೆ ತಲುಪಿದೆ. ಹಾಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,67,95,549ಕ್ಕೆ ತಲುಪಿದೆ.

ತಮಿಳುನಾಡಿನಲ್ಲಿ ಹೆಚ್ಚು ಸೋಂಕಿತರ ಪತ್ತೆಯಾಗಿದ್ದಾರೆ. ಅಲ್ಲಿ 22,652 ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 16,229 ಪ್ರಕರಣಗಳು, ಕರ್ನಾಟಕ 16,068 ಪ್ರಕರಂಗಳು, ಮಹಾರಾಷ್ಟ್ರದಲ್ಲಿ 14,158 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 10,413 ಪ್ರಕರಣಗಳು ಕಾಣಿಸಿಕೊಂಡಿವೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.