ಪುಷ್ಪರಾಜ್ ಸಿನಿಮಾ ಬಿಡಿ, ನಮ್ಮ ಗಿರಿರಾಜ್ ಸಿನಿಮಾ ನೋಡಿ
 

ಇದು ಸಿನಿಮಾ ವಿಮರ್ಶೆ ಅಲ್ಲ. ಯಾಕಂದ್ರೆ ಇಂಥ ಸಿನಿಮಾ ವಿಮರ್ಶೆ ಮಾಡೋ ಯೋಗ್ಯತೆ ನನಗಿದೆಯೋ, ಇಲ್ಲವೋ, ನನಗೇ ಗೊತ್ತಿಲ್ಲ ಅನ್ನಿಸುವಷ್ಟು ಅಚ್ಚರಿ, ಖುಷಿ ಕೊಟ್ಟ ಚಿತ್ರ ಇದು. ಆರಂಭದ ಒಂದಷ್ಟು ದೃಶ್ಯಗಳಲ್ಲಿ ಒಂಥರಾ ಡಾಕ್ಯುಮೆಂಟರಿ ಮಾಡಿದ್ದಾರೇನೋ ಅನಿಸಿದರೂ ಅದರಲ್ಲಿ ಸಾಕಷ್ಟು ಮೆಚ್ಯೂರ್ಡ್ ಕಂಟೆಂಟ್ ಇದೆ
 

ಗಿರಿರಾಜ್ ಅವರನ್ನು ಜಟ್ಟ ಸಿನಿಮಾದಿಂದ ಬಲ್ಲೆ. ಅವರು ‘ನಂಬಬಲ್ ನಿರ್ದೇಶಕ’ ಅನ್ನೋದು ಗೊತ್ತಿತ್ತು. ಅದು ಮತ್ತೊಮ್ಮೆ ನಿಜ ಆಯ್ತು.

ಕನ್ನಡ ಭಾಷಾ ಪ್ರೀತಿಯನ್ನು ಪಕ್ಕಾ ಕಮರ್ಷಿಯಲ್ ಆಗಿಯೂ ಹೇಳಬಹುದು ಎಂದು ತೋರಿಸಿಕೊಟ್ಟಿರುವ ಕನ್ನಡಿಗ ಸಿನಿಮಾ,

* ದೃಶ್ಯ ಚಿತ್ರದಲ್ಲಿ ಅಭಿನಯಿಸಿದ ನಂತರ ಇತ್ತೀಚೆಗೆ, ರವಿಚಂದ್ರನ್ ಮೊದಲಿಗಿಂತ ತುಂಬಾ ಅದ್ಭುತ ನಟ ಅನ್ನಿಸುತ್ತಿದ್ದಾರೆ.

ಪುಷ್ಪ ಸಿನಿಮಾದ ಕನ್ನಡ ಅವತರಣಿಕೆ ನಮ್ಮಲ್ಲಿ ಕಾಟಾಚಾರಕ್ಕೆ ಬಿಡುಗಡೆ ಆಗಿದೆ ಅಂತ ಒಂದೇ ಕಣ್ಣಲ್ಲಿ ಅಳ್ತಾ ಇರೋ ಡಬ್ಬಿಂಗ್ ಪ್ರಿಯರನ್ನು ನೋಡಿದ, ನಮ್ಮ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅಲ್ಲಿಂದಲೇ, ತಮ್ಮ ಎಂದಿನ ಶೈಲಿಯಲ್ಲಿ ‘ ಪುಷ್ಪಾ, ಐ ಹೇಟ್ ಟಿಯರ್ಸ್’ ಅಂದ್ರಂತೆ. ಅದಕ್ಕೇ ಈ ಪುಷ್ಪರಾಜ್ ಸಹವಾಸವೇ ಬೇಡ ಅಂತ ನಿನ್ನೆ ರಾತ್ರಿ 12 ಗಂಟೆಗೆ ಝೀ 5 ನಲ್ಲಿ ಬಿಡುಗಡೆ ಆದ, ನಮ್ಮ ಗಿರಿರಾಜ್ ಅವರ ಕನ್ನಡಿಗ ಸಿನಿಮಾ ನೋಡಿದೆ.. ಫಸ್ಟ್ ನೈಟ್, ಫಸ್ಟ್ ಶೋ.
ಇದು ಸಿನಿಮಾ ವಿಮರ್ಶೆ ಅಲ್ಲ. ಯಾಕಂದ್ರೆ ಇಂಥ ಸಿನಿಮಾ ವಿಮರ್ಶೆ ಮಾಡೋ ಯೋಗ್ಯತೆ ನನಗಿದೆಯೋ, ಇಲ್ಲವೋ, ನನಗೇ ಗೊತ್ತಿಲ್ಲ ಅನ್ನಿಸುವಷ್ಟು ಅಚ್ಚರಿ, ಖುಷಿ ಕೊಟ್ಟ ಚಿತ್ರ ಇದು. ಆರಂಭದ ಒಂದಷ್ಟು ದೃಶ್ಯಗಳಲ್ಲಿ ಒಂಥರಾ ಡಾಕ್ಯುಮೆಂಟರಿ ಮಾಡಿದ್ದಾರೇನೋ ಅನಿಸಿದರೂ ಅದರಲ್ಲಿ ಸಾಕಷ್ಟು ಮೆಚ್ಯೂರ್ಡ್ ಕಂಟೆಂಟ್ ಇದೆ. ಕನ್ನಡ ನಿಘಂಟು ಬರೆದ ಕಿಟೆಲ್ ಅವರ ಪಾತ್ರ ಸೇರಿದಂತೆ ಎಲ್ಲವೂ ಕನ್ನಡಮಯ. ಆದರೆ ಇದರಲ್ಲಿ ಕೇವಲ ಕನ್ನಡ ಪ್ರೀತಿ ಅಷ್ಟೇ ಅಲ್ಲ, ಜೀವನ ಪ್ರೀತಿ, ರೀತಿ, ನೀತಿ, ಜಾತಿ, ಧರ್ಮ ಎಲ್ಲವೂ ಇದೆ. ಇವನ್ಯಾರೋ ಜರ್ಮನಿ ಮನುಷ್ಯ, ಕನ್ನಡ ನಿಘಂಟು ಯಾಕೆ ಬರೆದ ಅನ್ನೋ ಕುತೂಹಲದ ಕಾರಣಕ್ಕೆ ನಾನು ಕಿಟೆಲ್ ಬಗ್ಗೆ ಓದಿಕೊಂಡಿದ್ದರಿಂದ, ಈ ಎಪಿಸೋಡ್ ನಂಗೆ ಕನೆಕ್ಟ್ ಆಯಿತು. ಸಿನಿಮಾ ಉದ್ದಕ್ಕೂ ಅದೇ ಇರುತ್ತೆ ಅಂದ್ಕೊಂಡಿದ್ದ ನನಗೆ ಆನಂತರದಲ್ಲಿ ಪಕ್ಕಾ ‘ಕಮರ್ಷಿಯಲ್ ಕನ್ನಡ ಸಿನಿಮಾ’ ಸಿಕ್ಕಿತು.
ಗಿರಿರಾಜ್ ಅವರನ್ನು ಜಟ್ಟ ಸಿನಿಮಾದಿಂದ ಬಲ್ಲೆ. ಅವರು ‘ನಂಬಬಲ್ ನಿರ್ದೇಶಕ’ ಅನ್ನೋದು ಗೊತ್ತಿತ್ತು. ಅದು ಮತ್ತೊಮ್ಮೆ ನಿಜ ಆಯ್ತು. ಸಾಮಾನ್ಯವಾಗಿ 15 ದಿನದಲ್ಲಿ ಒನ್ ಲೈನ್ ಕಥೆ, ಚಿತ್ರಕಥೆ, ಸಂಭಾಷಣೆ ಅಂತ ಬರೆದುಕೊಂಡು, ಆಮೇಲೆ ‘ಶೂಟಿಂಗ್ ಮಾಡೋದು ಎಷ್ಟು ಕಷ್ಟ ಗೊತ್ತೇನ್ರೀ’ ಎಂದುಕೊಂಡೇ ಸಿನಿಮಾ ಮಾಡೋರು ಜಾಸ್ತಿ. ಆದರೆ ಕನ್ನಡಿಗ ಸಿನಿಮಾ ನೋಡಿದ್ರೆ, ಶೂಟಿಂಗ್ ಮಾಡೋಕೆ ಮುಂಚೆಯೂ, ಬರವಣಿಗೆಗೆ ಅಂತನೇ ಎಷ್ಟು ಮಾಹಿತಿ ಕಲೆ ಹಾಕಿದ್ದಾರೆ ಗಿರಿರಾಜ್ ಅಂತ ಆಶ್ಚರ್ಯ, ಹೆಮ್ಮೆ ಎರಡೂ ಆಗುತ್ತೆ. ಅದಕ್ಕೆ ಗಿರಿರಾಜ್ ಮತ್ತು ಅವರ ತಂಡಕ್ಕೊಂದು ನಮಸ್ಕಾರ.
ಕನ್ನಡ ಮಾತನಾಡುವ ಕಿಟೆಲ್, ಕೊರಗಜ್ಜ, ಬುಳ್ಳ ಪಾತ್ರಧಾರಿ ಮೈತ್ರಿ ಖ್ಯಾತಿಯ ಜಗ್ಗ, ಮಾತೇ ಆಡದ ಹ್ಯಾನ ಪಾತ್ರದ ಜೀವಿಕ, ತುಂಗಕ್ಕನಾಗಿ ರಚನ, ಈ ಎಲ್ಲ ಪ್ರೀತಿಯ ಕನ್ನಡಿಗ, ಕನ್ನಡತಿಯರನ್ನು ನೋಡೋದೇ ಒಂದು ಹಬ್ಬ. ಜೊತೆಗೆ, ಬ್ರಹ್ಮಾಂಡ ಗುರೂಜಿಯನ್ನು ಇಷ್ಟು ಸೆನ್ಸಿಬಲ್ ಆಗಿ ಬಳಸಿಕೊಳ್ಳಬಹುದು ಅಂತ ತೋರಿಸಿರೋದು ಗಿರಿರಾಜ್ ಅವರ ಹೆಗ್ಗಳಿಕೆ.
ಆದರೆ ಚಿತ್ರದ ಪ್ರಮುಖ ಪಾತ್ರಧಾರಿಗಳು ನಿಮ್ಮನ್ನು ಇನ್ನಿಲ್ಲದಂತೆ ಆವರಿಸಿಕೊಳ್ಳುತ್ತಾರೆ. ಅದೇನೋ, ದೃಶ್ಯ ಚಿತ್ರದಲ್ಲಿ ಅಭಿನಯಿಸಿದ ನಂತರ ಇತ್ತೀಚೆಗೆ, ರವಿಚಂದ್ರನ್ ಮೊದಲಿಗಿಂತ ತುಂಬಾ ಅದ್ಭುತ ನಟ ಅನ್ನಿಸುತ್ತಿದ್ದಾರೆ. ಈ ಚಿತ್ರದಲ್ಲಂತೂ ಅವರ ಅಭಿನಯವಷ್ಟೇ ಅಲ್ಲ, ಕನ್ನಡದ ಕ್ಲಿಷ್ಟ ಪದಗಳ ಉಚ್ಚಾರಣೆಯೂ ಅದ್ಭುತ. ನಾನಂತೂ ನಿರೀಕ್ಷೆ ಮಾಡಿರಲಿಲ್ಲ. ಇನ್ನು, ಅಚ್ಚ ಕನ್ನಡದ ಪ್ರತಿಭಾವಂತ ನಟಿ ಪಾವನಾ, ಪ್ರತಿ ಸಿನಿಮಾದಲ್ಲೂ ಸರ್ಪ್ರೈಸ್ ಕೊಡುತ್ತಾರೆ. ರವಿಚಂದ್ರನ್ ಅವರಂತಹ ಸೀನಿಯರ್ ನಟನ ಜೊತೆಗೂ ಆಕೆಯ ಅಭಿನಯ ನೋಡಿದ್ದು, ಮಾತುಗಳನ್ನು ಕೇಳಿದ್ದು ಕನ್ನಡಿಗನಾಗಿ ನನ್ನ ಹೆಮ್ಮೆ. ಅರ್ಧ ಸಿನಿಮಾ ಆದಮೇಲೆ ಬರುವ ಬಾಲಾಜಿ ಮನೋಹರ್ ಕನ್ನಡಿಗನ ಖದರ್ ಹೆಚ್ಚಿಸಿದ್ದಾರೆ. ವಿಶೇಷ, ಅಂದ್ರೆ, ಇವರೆಲ್ಲರ ಮಧ್ಯೆ ಶೃಂಗ, ಸಿನಿಮಾ ಶೂಟಿಂಗಿನ ಮಧ್ಯೆ ಬಂದು ಹೋಗಿದ್ದಾರೇನೋ ಎನ್ನುವಷ್ಟು ಸಹಜವಾಗಿ ಅಭಿನಯಿಸಿದ್ದಾರೆ. ಚಿತ್ರದ ಮುಖ್ಯ ಸರ್ ಪ್ರೈಸ್ ಪರ್ಫಾರ್ಮನ್ಸ್ ಅಂದ್ರೆ ಲಕ್ಷ್ಮಿ ಪಾತ್ರದ ಜಯಶ್ರೀ ಅವರದ್ದು. ಈಕೆ ಮಾರಿಮುತ್ತು ಅವರ ಮೊಮ್ಮಗಳಂತೆ. ಮೊದಲ ದೃಶ್ಯದಲ್ಲೇ ಯಾರೀ ಹುಡುಗಿ ಇಷ್ಟು ಚುರುಕಾಗಿದ್ದರೂ ಕೊಂಚವೂ ನಾಟಕೀಯ ಅನಿಸದ ರೀತಿ ಅಭಿನಯ ಮಾಡ್ತಿದ್ದಾಳೆ ಅನ್ನಿಸುತ್ತೆ. ಪಾತ್ರದ ವಿಷಯದಲ್ಲಿ ಕೊನೆಗೆ ಬೇಸರ ಮೂಡಿಸಿದರೂ ಅಭಿನಯದಲ್ಲಿ ಲಕ್ಷ್ಮಿ ನಿಜಕ್ಕೂ ಖುಷಿ ಕೊಟ್ಟಳು.
ಒಟ್ಟಾರೆ ಒಂದು ಅಚ್ಚ ಕನ್ನಡದ ಪ್ಯಾಕೇಜ್ ಆಗಿ, ಕನ್ನಡ ಭಾಷಾ ಪ್ರೀತಿಯನ್ನು ಪಕ್ಕಾ ಕಮರ್ಷಿಯಲ್ ಆಗಿಯೂ ಹೇಳಬಹುದು ಎಂದು ತೋರಿಸಿಕೊಟ್ಟಿರುವ ಕನ್ನಡಿಗ ಸಿನಿಮಾ, ಒಂದು ರಿಫ್ರೆಷಿಂಗ್ ಅನುಭವ ಕೊಡೋದಂತೂ ಪಕ್ಕಾ. 
ಇಲ್ಲಿ ಭಾಷಾ ಪ್ರೀತಿ-ದ್ವೇಷ ಅಷ್ಟೇ ಅಲ್ಲ, ಜಾತಿ ಪ್ರೀತಿ-ದ್ವೇಷ, ಧರ್ಮ ಪ್ರೀತಿ-ದ್ವೇಷ, ಎಲ್ಲವೂ ಇದೆ. ಅದನ್ನು ನೋಡ್ಕೊಂಡು ಕಿರಿಕ್ ಮಾಡೋರು ಮಾಡಿಕೊಳ್ಳಬಹುದು. ಆದರೆ, ನಾನಂತೂ ನನಗೆ ಹೆಂಗ್ ಬೇಕೋ ಹಂಗೆ ನೋಡ್ಕೊಂಡೆ.
ಕೊನೆಗೊಂದು ಮಾತು, ಈ ಚಿತ್ರದಲ್ಲಿ ಕನ್ನಡ ಪ್ರೀತಿ ಇದೆ. ಅಲ್ಲದೆ ಇವತ್ತು ನಮಗೆ ಕನ್ನಡ ಭಾಷೆ ಗೊತ್ತು ಅಂದ್ರೆ, ಅದಕ್ಕೆ ಪಠ್ಯ ಪುಸ್ತಕಗಳು ಸೇರಿದಂತೆ ನಾವು ಓದಿರೋ ಹಲವು ಪುಸ್ತಕಗಳು ಕಾರಣ.  ಪಠ್ಯ ಪುಸ್ತಕ, ಕಾದಂಬರಿಗಳನ್ನು ಬರೆದ ಲೇಖಕರು ನಮಗೆ ಗೊತ್ತು. ಆದರೆ ಕನ್ನಡ ಲಿಪಿಯನ್ನು ಹಲವಾರು ತಲೆಮಾರುಗಳವರೆಗೆ ಕಾಪಾಡಿ, ನಮ್ಮವರೆಗೆ ತಲುಪಿಸಿಕೊಂಡು ಬಂದ ಲಿಪಿಕಾರರ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಇವತ್ತು ನಮಗೆ ಕನ್ನಡ ಓದಲು, ಬರೆಯಲು ಬರುತ್ತೆ ಅಂದ್ರೆ, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆ ಕನ್ನಡ ಓದುತ್ತೀವಿ, ಬರೀತೀವಿ ಅಂದ್ರೆ, ಜೊತೆಗೆ, ನನ್ನಂಥ ಕೆಲವರು ಕನ್ನಡ ಬರವಣಿಗೆಯಿಂದಲೇ ಜೀವನ ಮಾಡ್ತಾ ಇದ್ದೀವಿ ಅಂದ್ರೆ, ಅದಕ್ಕೆ ಕಾರಣ ಈ ಮೂಲ ಲಿಪಿಕಾರರು. ಹಾಗಾಗಿ, ನಾವಿವತ್ತು ಕನ್ನಡ ಬಲ್ಲೆವು ಅಂದ್ರೆ, ಆ ಲಿಪಿಕಾರರ ದೊಡ್ಡ ಋಣ ನಮ್ಮ ಮೇಲಿದೆ. ಕನಿಷ್ಟ ಪಕ್ಷ, ಅದಕ್ಕೋಸ್ಕರನಾದ್ರೂ ಪ್ರತಿಯೊಬ್ಬ ಕನ್ನಡಿಗನೂ ಈ ಸಿನಿಮಾ ನೋಡಬೇಕು.