ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿಗೆ ಸಂಸದರೇ ಕಾರಣ: ಸಿದ್ದರಾಮಯ್ಯ

ಸಂಸದ ಪ್ರತಾಪ್​ ಸಿಂಹ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ

 

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್​ ನಡುವೆ ಒಡುಕು ಮೂಡಿಸಿ, ಎತ್ತಿಕಟ್ಟುವ ಕೆಲಸ ಮಾಡಿದ್ದು, ಸಂಸದ ಪ್ರತಾಪ್​ ಸಿಂಹ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಇಬ್ಬರು ಐಎಎಸ್​ ಅಧಿಕಾರಿಗಳ ನಡುವೆ ಜಟಾಪಟಿ ತಂದಿಟ್ಟಿದ್ದು, ಅದೆಂತದೋ ಸಿಂಹ ಹಾಗೂ ಜೆಡಿಎಸ್​ ನಾಯಕ ಸಾರಾ ಮಹೇಶ್​ ಎಂದು ಆರೋಪಿಸಿದ ಅವರು, ಬಿಜೆಪಿಯವರಿಗೆ ರೋಹಿಣಿ ಸಿಂಧೂರಿಯನ್ನು ತೆಗೆದು ಶಿಲ್ಪಾ ನಾಗ್ ಅವರನ್ನು ಜಿಲ್ಲಾಧಿಕಾರಯನ್ನಾಗಿ ಮಾಡಬೇಕು ಎಂದುಕೊಂಡಿದ್ದರು. ಈ ಮೂಲಕವೇ ಅಧಿಕಾರಿಗಳು ಆರೋಪ ಪ್ರತ್ಯಾರೋಪ ನಡೆಸುವಂತೆ ಕುಮ್ಮಕ್ಕು ನೀಡಿದರು ಎಂದು ಟೀಕಿಸಿದ್ದಾರೆ.

ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿರುವ ಹಿನ್ನೆಲೆ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ಆದರೆ ವರ್ಗಾವಣೆ ಅವರ ತಪ್ಪಿಗೆ ಶಿಕ್ಷೆ ಅಲ್ಲ. ರೋಹಿಣಿ ಸಿಂಧೂರಿ ಭೂಮಿ ಹಗರಣದ ಬಗ್ಗೆ ತನಿಖೆ ಮಾಡಿದ ಕಾರಣದಿಂದಲೇ ತಮ್ಮ ವರ್ಗಾವಣೆ ಆಗಿದೆ ಎಂದಿದ್ದಾರೆ. ಈ ಬಗ್ಗೆ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂಸದ ಅವರದೇ ಸರ್ಕಾರದ ಅಧಿಕಾರಿಗಳನ್ನು ಬೆಂಬಲಿಸುವುದು, ತೆಗಳುವ ಕೆಲಸ ಮಾಡುವುದು ಸರಿಯಲ್ಲ. ಚುನಾಯಿತ ಅಧಿಕಾರಿ ಜನರಿಗಾಗಿ ಕೆಲಸ ಮಾಡಬೇಕು. ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು. ಕ್ಷೇತ್ರದ ಸಂಸದರಾಗಿ ಅಧಿಕಾರಿಗಳ ನಡುವೆ ಹೊಂದಾಣಿಕೆ ನಡೆಸಬೇಕೆ ಹೊರತು ಈ ರೀತಿ ಎತ್ತಿಕಟ್ಟುವ ಕಾರ್ಯ ನಡೆಸಬಾರದು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ಬಿಕ್ಕಟ್ಟಿನಲ್ಲೂ ಮೈಸೂರಿನಲ್ಲಿ ಅಧಿಕಾರಿಗಳು ನಡುವೆ ನಡೆದ ಜಟಾಪಟಿ ಸರ್ಕಾರಕ್ಕೆ ಮುಜುಗರ ತಂದೊಟ್ಟಿತು. ಕೋವಿಡ್​ ನಿರ್ವಹಣೆ ವಿಚಾರ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪಾಲಿಕೆ ಸದಸ್ಯರು ಶಿಲ್ಪಾನಾಗ್ ಗೆ ಬೆಂಬಲ ವ್ಯಕ್ತಪಡಿಸಿದ ರೋಹಿಣಿ ಸಿಂಧೂರಿ ವಿರುದ್ಧ ದೂರಿದರು. ಆದರೆ, ರೋಹಿಣಿ ಸಿಂಧೂರಿ ಮಾತ್ರ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಪ್ರತ್ಯುತ್ತರ ನೀಡಿದ್ದರು. ಈ ಇಬ್ಬರು ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಅಂತ್ಯ ಹಾಡಲು ಮುಂದಾದ ಸರ್ಕಾರ ಶನಿವಾರ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿತು.