ಬಿಮ್ಸ್ ಎದುರು ಕೋವ್ಯಾಕ್ಸಿನ್ ಮುಗಿದಿದೆ ಫಲಕ: ಲಸಿಕೆ ಪಡೆಯಲು ಬಂದವರು ಬರಿಗೈಯಲ್ಲಿ ವಾಪಸ್

ಲಸಿಕೆ ಮುಗಿದರೂ ಮುಂಚಿತವಾಗಿ ಮಾಹಿತಿ ನೀಡದ ಸರಕಾರಕ್ಕೆ ಹಿಡಿಶಾಪ

 

ಬೆಳಗಾವಿ: ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರತೆ ಅಷ್ಟೇ ಅಲ್ಲ, ಸಂಗ್ರಹವೇ ಮುಗಿದುಹೋಗಿದೆ. ಬಿಮ್ಸ್ ಆಡಳಿತ ಮಂಡಳಿ ಲಸಿಕಾ ಕೇಂದ್ರದ ಹೊರಗಡೆ ಸದ್ಯಕ್ಕೆ ಕೋವ್ಯಾಕ್ಸಿನ್ ಔಟ್ ಆಫ್ ಸ್ಟಾಕ್’ ಎಂದು ಸೂಚನಾ ಪತ್ರ ಅಂಟಿಸಿದೆ. ಲಸಿಕೆ ಪಡೆಯಲು ದೂರ ದೂರದಿಂದ ಬಂದವರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ ಮನೆಗೆ ಮರಳಿ ಲಸಿಕೆ ಮುಗಿದರೂ ಮುಂಚಿತವಾಗಿ ಮಾಹಿತಿ ನೀಡದ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರತೆ ತಲೆ ಎತ್ತಿದೆ. ಮೊದಲನೇ ಡೋಸ್ ಕೋವ್ಯಾಕ್ಸಿನ್ ತೆಗೆದುಕೊಂಡವರು ಎರಡನೇ ಡೋಸ್ ಪಡೆಯಲು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ ಲಸಿಕೆ ಸಿಗದೆ ವಾಪಸ್ ತೆರಳುತ್ತಿದ್ದಾರೆ.

ಈ ವೇಳೆ ಲಸಿಕೆ ಲಭ್ಯವಿಲ್ಲ ಎಂದು ಫಲಕ ನೋಡಿ ನಿರಾಸೆಗೊಂಡು ಮರಳಿ ಹೊರಟಿದ್ದ ಫ್ರಂಟ್‍ಲೈನ್ ವರ್ಕರ್ ಶಿಕ್ಷಕಿ ಪೂರ್ಣಿಮಾ ಮಾತನಾಡಿ, 40 ದಿನಗಳ ಹಿಂದೆ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದೆ. ಎರಡನೇ ಡೋಸ್ ನೀಡಲು ಕೋವ್ಯಾಕ್ಸಿನ್ ಇಲ್ಲ ಅನ್ನುತ್ತಿದ್ದಾರೆ. ಒಂದು ವಾರದಿಂದ ತಪ್ಪದಂತೆ ಲಸಿಕೆ ಕೇಂದ್ರಗಳಿಗೆ ಅಲೆಯುತ್ತಿದ್ದೇವೆ. ಲಾಕ್‍ಡೌನ್ ಎಂದು ದಿನವೂ ಪೆÇಲೀಸರಲ್ಲಿ ಮನವಿ ಮಾಡೋದು. ಲಸಿಕೆ ಕೇಂದ್ರಕ್ಕೆ ಬರೋದು ಇದೇ ಆಗಿ ಹೋಗಿದೆ. ನಮಗೆ ಕಷ್ಟ ಆಗ್ತಿದೆ, ಏನು ಸರಕಾರನೋ ಏನೋ ಎಂದು ಅಳಲು ತೋಡಿಕೊಂಡರು.

ಒಟ್ಟಿನಲ್ಲಿ ಲಸಿಕೆ ಮುಗಿದಿದೆ ಎಂಬ ಫಲಕ ಸರಕಾರದ ಅಸಹಾಯಕತೆಯನ್ನು ಹೇಳುತ್ತಿದ್ದರೆ, ಲಸಿಕೆ ಪಡೆಯಲಾಗದ ನೋವು ನಾಗರಿಕರನ್ನು ಬೆಂಬಿಡದೇ ಕಾಡುತ್ತಿದೆ.