ಚಂದ್ರಯಾನ-3 ಗಗನ ನೌಕೆ ಸೆರೆಹಿಡಿದ ಚಂದ್ರನ ಮೊದಲ ಚಿತ್ರ ವೈರಲ್

ಚಂದ್ರಯಾನ-3 (Chandrayaan-3) ಗಗನ ನೌಕೆಯು ಭೂಮಿಯಿಂದ ಹಾರಿ 22 ದಿನಗಳ ಬಳಿಕ ಶನಿವಾರ ಚಂದ್ರನ ಕಕ್ಷೆ ಸೇರಿದ ನಂತರ ಚಿತ್ರಗಳನ್ನು ಸೆರೆಹಿಡಿದಿದೆ. ಈ ಕುರಿತ ವೀಡಿಯೋ ತುಣುಕನ್ನು ಚಂದ್ರಯಾನ್-3 ಮಿಷನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮೂನ್ ಮಿಷನ್ (Moon Mission) ಕಾರ್ಯಾಚರಣೆ ಇಲ್ಲಿಯವರೆಗೆ ಸುಗಮವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23 ರಂದು ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ .
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಶನಿವಾರ ಸಂಜೆ ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದೆ. ಚಂದ್ರಯಾನ-3 ಗಗನನೌಕೆಯನ್ನ ಸೇರಿಸುವ ಲೂನಾರ್ ಆರ್ಬಿಟ್ ಇನ್ಸೆರ್ಷನ್ ಪ್ರಕ್ರಿಯೆಯನ್ನು ಇಸ್ರೋ ಪೂರ್ಣಗೊಳಿಸಿದೆ. ಬೆಂಗಳೂರಿನ ಇಸ್ರೋದ ಟೆಲಿಮೆಟ್ರಿ, ಟ್ರ‍್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಸಂಸ್ಥೆಯು ಲೂನಾರ್ ಆರ್ಬಿಟ್ ಇಂಜೆಕ್ಷನ್ (Lunar Orbit Injection) ಪ್ರಕ್ರಿಯೆಯನ್ನ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದೆ. ಲ್ಯಾಂಡರ್ ಸದ್ಯ ಚಂದ್ರನ ಗುರುತ್ವಾಕರ್ಷಣೆ ಅನುಭವಿಸುತ್ತಿರುವುದಾಗಿ ಇಸ್ರೋ ಶನಿವಾರ ಹೇಳಿತ್ತು.
The Moon, as viewed by #Chandrayaan3 spacecraft during Lunar Orbit Insertion (LOI) on August 5, 2023.#ISRO pic.twitter.com/xQtVyLTu0c
— LVM3-M4/CHANDRAYAAN-3 MISSION (@chandrayaan_3) August 6, 2023
ಮುಂದಿನ ಕಾರ್ಯಾಚರಣೆ ಹೇಗೆ ನಡೆಯಲಿದೆ?
ಚಂದ್ರಯಾನ-3 ಗಗನನೌಕೆಯು ಆಗಸ್ಟ್ 5 ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ. ಈ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲು ದ್ರವ ಎಂಜಿನ್ ಅನ್ನು ಮತ್ತೆ ಉರಿಸಲಾಗುತ್ತದೆ. ಚಂದ್ರಯಾನವು ಚಂದ್ರನನ್ನು ನಾಲ್ಕು ಬಾರಿ ಸುತ್ತುತ್ತದೆ. ಪ್ರತಿ ಸುತ್ತಿನಲ್ಲೂ ಚಂದ್ರನ ಮೇಲ್ಮೈಗೆ ಹತ್ತಿರವಾಗುತ್ತದೆ.
ಆಗಸ್ಟ್ 17 ರಂದು ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್ ಬೇರ್ಪಟ್ಟ ನಂತರ, ಆಗಸ್ಟ್ 23 ರಂದು ಸಂಜೆ 5:47 ಕ್ಕೆ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈನ ದಕ್ಷಿಣ ಧ್ರುವದ ಬಳಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗುತ್ತದೆ. ಯಶಸ್ವಿ ಲ್ಯಾಂಡಿಂಗ್ ನಂತರ, ಮಿಷನ್ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈನಲ್ಲಿ ಒಂದು ಚಂದ್ರನ ದಿನ ಅಂದ್ರೆ 14 ಭೂಮಿಯ ದಿನಗಳವರೆಗೆ ಡೇಟಾವನ್ನು ಸಂಗ್ರಹಿಸುತ್ತದೆ.