ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ನಂತರ ಗ್ರೀನ್ ಫಂಗಸ್ ಪತ್ತೆ!

ಕೋರೋನಾದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಗ್ರೀನ್ ಫಂಗಸ್

 | 
Representative Image of green Fungus

ನವದೆಹಲಿ: ದೇಶದಲ್ಲಿ ಕೊರೋನಾ ನಂತರ ಬ್ಲ್ಯಾಕ್ ಫಂಗಸ್ ಆಯ್ತು, ವೈಟ್ ಫಂಗಸ್ ಆಯ್ತು, ಯೆಲ್ಲೋ ಫಂಗಸ್ ರೋಗಗಳು ಪತ್ತೆಯಾಗಿ ಜನರಲ್ಲಿ ಭಯ ಹುಟ್ಟಿಸಿದ್ದವು. ಇದೀಗ ಗ್ರೀನ್ ಫಂಗಸ್ ಕಾಣಿಸಿಕೊಂಡು ಈಗ ಜನರ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದ ಮಧ್ಯಪ್ರದೇಶ ರಾಜಧಾನಿ ಇಂದೋರ್ ನ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ. ಗ್ರೀನ್ ಫಂಗಸ್ ಕಾಣಿಸಿಕೊಂಡ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ ನಿಂದ ಮುಂಬೈಗೆ ಏರ್ ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಅಫ್ ಮೆಡಿಕಲ್ ಸೈನ್ಸ್ ನ ಹಿರಿಯ ವೈದ್ಯಾಧಿಕಾರಿ ಡಾ. ರವಿ ದೋಸಿ ಅವರು ಈ ಹೊಸ ಖಾಯಿಲೆಯು ಅಸ್ಪರ್ ಗಿಲ್ಲೋಸಿಸ್ ಸೋಂಕಾಗಿದ್ದು, ಇದು ಅಸಮಾನ್ಯವಾಗಿದೆ ಮತ್ತು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಈ ಫಂಗಸ್ ಬಗ್ಗೆ ಹೆಚ್ಚು ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಎರಡು ತಿಂಗಳುಗಳ ಕಾಲ ಕೊರೋನಾ ವಿರುದ್ಧ ಹೋರಾಡಿ ಚೇತರಿಸಿಕೊಂಡಿದ್ದ ವ್ಯಕ್ತಿಯಲ್ಲಿ ಬ್ಲಾಕ್​ ಫಂಗಸ್ ನ ಲಕ್ಷಣಗಳು ಕಾಣಿಸಿಕೊಂಡವು. ಅನುಮಾನದ ಮೇರೆಗೆ ಆತನನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷಿಸಿದಾಗ ಆತನ ಶ್ವಾಸಕೋಸಗಳು ಹಾಗೂ ರಕ್ತದಲ್ಲಿ ಹಸಿರು ಶಿಲೀಂಧ್ರ ಸೋಂಕು ಪತ್ತೆಯಾಗಿದೆ ಎಂದು ದೋಸಿ ತಿಳಿಸಿದ್ದಾರೆ.