ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ: ಪ್ರಧಾನಿ ಮೋದಿ

ಕೇಂದ್ರದಿಂದಲೇ ಉಚಿತ ಲಸಿಕೆ, ಬಡವರಿಗೆ ನವೆಂಬರ್​ವರೆಗೂ ಉಚಿತ ಆಹಾರ ಧಾನ್ಯ

 | 
Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಂಕಷ್ಟದ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದರು. ಕೊರೊನಾ ಬಿಕ್ಕಟ್ಟಿನಿಂದ ವಿಶ್ವದ ಹಲವು ದೇಶಗಳಂತೆಯೇ ಭಾರತವೂ ಸಂಕಷ್ಟ ಅನುಭವಿಸಿದೆ. ಇದು ಕಳೆದ 100 ವರ್ಷಗಳಲ್ಲಿ ಇತಿಹಾಸ ಕಂಡ ದೊಡ್ಡ ಮಹಾಮಾರಿಯಾಗಿದ್ದು, ಇಂಥ ಮಹಾಮಾರಿಯನ್ನು ಆಧುನಿಕ ಜಗತ್ತು ಕಂಡು-ಕೇಳಿರಲಿಲ್ಲ, ನೋಡಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ತುರ್ತಾಗಿ ನಾವು ಹೊಂದಿಸಿದೆವು. ಆದರೆ, ಮೆಡಿಕಲ್ ಆಕ್ಸಿಜನ್ ಅವಶ್ಯಕತೆ ಇಷ್ಟೊಂದಿರುತ್ತೆ ಎಂದು ಊಹಿಸಿರಲ್ಲ. ಇದನ್ನು ಪೂರೈಸಲು ಯುದ್ಧೋಪಾದಿಯಲ್ಲಿ ನಾವು ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಲಸಿಕೆ ಎನ್ನುವುದು ರಕ್ಷಾ ಕವಚ. ಇಂದು ವಿಶ್ವದೆಲ್ಲೆಡೆ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ನಮಗೆ ನಮ್ಮ ದೇಶದ ಬಡವರ ಬಗ್ಗೆ ಚಿಂತೆಯಿತ್ತು. ಅವರಿಗೆ ಲಸಿಕೆ ಸಿಗುವುದಿಲ್ಲ ಎಂಬ ಆತಂಕವಿತ್ತು. ಆದರೆ ನಮ್ಮ ದೇಶದ ಎರಡು ಕಂಪನಿಗಳು ಲಸಿಕೆ ಒದಗಿಸಿದವು. ನಾವು ವಿಶ್ವದ ಹಲವು ದೇಶಗಳಿಗಿಂತ ಲಸಿಕೆ ಕೊಡುವ ವಿಚಾರದಲ್ಲಿ ಮುಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಹೆಚ್ಚಲಿದ್ದು, ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ. ಇತರ ದೇಶಗಳ ಕಂಪನಿಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆ ಆರಂಭಿಸಿದ್ದೇವೆ. ರಾಜ್ಯಗಳಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಇದ್ದ ಶೇ 25ರಷ್ಟು ಹೊಣೆಗಾರಿಕೆಯನ್ನೂ ಭಾರತ ಸರ್ಕಾರವೇ ತೆಗೆದುಕೊಳ್ಳಲಿದೆ. ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಲಸಿಕೆಯನ್ನು ಉಚಿತವಾಗಿ ಕೊಡಲಿದೆ ಎಂದರು.

ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ ನೀಡಲು ನಿರ್ಧರಿಸಿದ್ದು, ದೇಶದ 80 ಕೋಟಿ ಜನರಿಗೆ ಉಚಿತ ಧಾನ್ಯ ಸಿಗಲಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.