Film Review ವೇದ
ವೇದ ಸಿನಿಮಾ ಇನ್ ಒನ್ ಲೈನು: ಹೊಸ ಬಾಟಲ್ ನಲ್ಲಿ ಹಳೇ ವೈನು.
ರೇಟಿಂಗ್ : ***½

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತಾನೇ ಒಂದು ಗಾದೆ ಇದೆ. ಪ್ರಪಂಚದ ಎಲ್ಲಾ ಸಿನಿಮಾ ರೈಟರ್ಸು ಬದಲಾದರೂ ಕನ್ನಡದ ರೈಟರ್ಸು ಮಾತ್ರ ಇನ್ನೂ ಬದಲಾಗರು ಅನ್ಸುತ್ತೆ. ಈಗಲೂ ಅದೇ ಸೇಡು ತೀರಿಸಿಕೊಳ್ಳುವ ಕತೆ ಮಾಡಿ ಬಹುಶಃ ಪ್ರೇಕ್ಷಕರ ಮೇಲಿರುವ ಜನ್ಮಾಂತರಗಳ ಸೇಡು ತೀರಿಸಿಕೊಳ್ಳುತ್ತಿದ್ದಾರೇನೋ ಅನ್ನುವ ಅನುಮಾನ. ಆದರೂ ಇಂತಹಾ ಸಿನಿಮಾನ ಮೆಚ್ಚಲು ಕಾರಣ, ತಮ್ಮ ನೆಚ್ಚಿನ ನಟನ ಮೇಲಿರುವ ಅಭಿಮಾನ. ಹೀಗೆ ಬಂದಿರುವ "ವೇದ", ಪ್ರೇಕ್ಷಕರಿಗೆ ಶಿವಣ್ಣನ ನೂರಿಪ್ಪತ್ತೈದನೆಯ ಬಹುಮಾನ.
ವೇದನ ಕೈಯ್ಯೇಟಿಗಿಂತ, ಉರಿ "ಕಣ್ಣೇಟಿಗಿಂತ" ಜೈಲಿಂದ ಬೈಲಿಗೆ ಬಂದ ಕನಕನ "ಕಲ್ಲೇಟು" ಜೋರಾಗಿ, "ಗಡಗಡ ನಡುಗುತ್ತಾ" ಸಾಯುವ ವೈರಿಗಳ ಹೆಣ ಬೀಳುವುದೇ ಇಡೀ ಸಿನಿಮಾದ ಹೂರಣ. ಎಳೇ ಮಗುವಿನ ಮೇಲಿನ ದೌರ್ಜನ್ಯದ ಎಳೆಯನ್ನು ಅವರದೇ ಹಳೇ ಸಿನಿಮಾ "ಬೈರಾಗಿ"ಯಿಂದ ಎಳೆದು ತಂದಂತಿದೆ. ಆದರೂ ನಿರ್ದೇಶಕ ಹರ್ಷರ ನಿರೂಪಣೆಯಲ್ಲಿ ಹಳೇ ಕತೆಯೂ ಹೊಸಾ ದಿರಿಸು ಧರಿಸಿದೆ. ಅವರ ಭಜರಂಗಿ, ಭಜರಂಗಿ 2 ನೋಡಿದವರಿಗೆ ಗೊತ್ತಿರುತ್ತದೆ. ಯಾವುದೋ ಕಾಲಮಾನದ ಕತೆ, ಆ ಕತೆಯಲ್ಲಿ ಕಾಣಸಿಗುವ ಯಾವುದೋ ಕಾಲದ ಮಾನವರು, ಅವರ ಡ್ರೆಸ್ಸು, ಅಡ್ರೆಸ್ಸು ವಿಶಿಷ್ಟ. ಸಿನಿಮಾದೊಳಗಿನ ಸೆಟ್ಟು, ಅಸೆಟ್ಟು ವಿಭಿನ್ನ. ಅಲ್ಲಿನ ಜನರ ಕಾನೂನು ಪದ್ಧತಿ, ಆಚರಣೆಗಳು ವಿಚಿತ್ರ. ಅದೇ ಮಾದರಿ ಇಲ್ಲೂ ಮುಂದುವರಿದಿದೆ.
1965 ನಿಂದ 1985 ವರೆಗೆ ನಡೆಯುವ ಕತೆಯಾಗಿರುವುದರಿಂದ ಎಲ್ಲ ತರ್ಕಗಳಿಗೂ ಅವಕಾಶವಿದೆ. ಆದರೂ ಪೋಲೀಸು ಮತ್ತು ಕೋರ್ಟು ದೃಶ್ಯಗಳು ಮಾತ್ರ ತರ್ಕಕ್ಕೆ ಮೀರಿದ್ದು. ಎಲ್ಲಾ ಸಿನಿಮಾಗಳಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಹೀರೋ ಎಲ್ಲರನ್ನೂ ಹೊಡೆದಾದ ಮೇಲೆ ಕೊನೆಯಲ್ಲಿ ಪೋಲಿಸ್ ಬರೋದು ಮಾಮೂಲು. ಇಲ್ಲಿ ಆರಂಭದಿಂದ ಅಂತ್ಯದ ವರೆಗೂ ಪ್ರತೀ ಕ್ರೈಮ್ ನಡೆದ ಮೇಲೆ ಪೋಲಿಸರ ಎಂಟ್ರಿ ಆಗುತ್ತದೆ. ಕೊನೆಯಲ್ಲಿ "ನನಗೆಲ್ಲಾ ಗೊತ್ತಿತ್ತು. ನೀವು ಸೇಡು ತೀರಿಸಿಕೊಳ್ಳಲಿ ಅಂತಾನೇ ಬಿಟ್ಟಿದ್ದೆ" ಅಂತ ಪೋಲಿಸ್ ಅಧಿಕಾರಿ ಡೈಲಾಗ್ ಬಿಟ್ಟಿದ್ದು ಕೇಳಿ ಅವರ "ಉದಾರ" ಮನೋಭಾವ ನೋಡಿದ ಪ್ರೇಕ್ಷಕ, ಇಂತಾ ಪೋಲಿಸ್ ಇದ್ದರೆ ಊರು "ಉದ್ದಾರ" ಅನ್ನೋ "ಉದ್ಗಾರ" ತೆಗೆಯುತ್ತಾರೆ. ಕೋರ್ಟು ದೃಶ್ಯವಂತೂ ಹಾಸ್ಯಾಸ್ಪದ. ಕಾನೂನು ಅವ್ಯವಸ್ಥೆಯನ್ನು ಡೀಟೈಲಾಗಿ ತೋರಿಸಿದ್ದರೆ ಅದಕ್ಕೊಂದು ತೂಕವಿರುತ್ತಿತ್ತು. ಆದರೆ ನಿರ್ದೇಶಕರ ಪ್ರಯಾರಿಟಿ ಬೇರೆಯದೇ ಇತ್ತು.
ಸೇಡಿಗೆ ಕಾರಣವನ್ನು ಮೊದಲೇ ತೋರಿಸಿದ್ದರೆ ಕನಕನ ಆಕ್ರೋಶದಲ್ಲಿ ಪ್ರೇಕ್ಷಕರು ಇನ್ನಷ್ಟು ಭಾಗಿಯಾಗುತ್ತಿದ್ದರು ಅನ್ನಿಸುತ್ತದೆ. ಆದರೆ ನಿರ್ದೇಶಕರು non linear ನಿರೂಪಣೆಗೆ ಗಮನ ನೀಡಿ, ಅಲ್ಲೊಂಚೂರು, ಇಲ್ಲೊಂಚೂರು ಬ್ರೇಕಿಂಗ್ ನ್ಯೂಸ್ ತರ ತೋರಿಸಿ ಕೊನೆಗೊಂದು ಟ್ವಿಸ್ಟ್ ಇಟ್ಟು ಪ್ರೇಕ್ಷಕರನ್ನು "ಬೆರಗಾದಿರೇ" ಎಂದು ಟೈಡ್ ವಾಷಿಂಗ್ ಪೌಡರ್ ಆ್ಯಡ್ ತರ ಆಟ ಆಡಿಸಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾದಲ್ಲಿ ಅವ ಶರ್ಟ್ ಬಿಚ್ಚಲೇ ಬೇಕು, ಎಮ್ರಾನ್ ಹಶ್ಮಿ ಸಿನಿಮಾದಲ್ಲಿ ಅವ ಹೀರೋಯಿನ್ ತುಟಿ ಮುಚ್ಚಲೇಬೇಕು ಅನ್ನುವ "ರೀಲ್" ದುನಿಯಾದ "ರೂಲ್" ಇದ್ದಂಗೆ, ಈ ಶಿವ, ಸಿನಿಮಾದಲ್ಲಿ "ಮಚ್ಚು" ಎತ್ತದೆ ಇದ್ದರೆ ಆ ಶಿವ "ಮೆಚ್ಚು"ವನೇ? ಅನ್ನೋ ಕಾರಣಕ್ಕೆ ಸುಡುವ ಮಚ್ಚಿನಿಂದ ಹಚ್ಚೆ ಇಡುವ ದೃಶ್ಯವೂ ಸೇರಿದೆ. ಜೊತೆಗೆ ಕನಕ ಕೈಯ್ಯಲ್ಲಿ ಹಿಡಿದ ಕತ್ತಿಯಿಂದ ಕಾಳಿಯಾಗಿ ಕಿರಿಕ್ ಲೇಡಿಯ ಕತ್ತು ಕತ್ತರಿಸುವ ಭೀಭತ್ಸ ದೃಶ್ಯವೂ ಚೂರಿದೆ.
ಮಾಮೂಲು ಕತೆ ಅನ್ನಿಸಿದರೂ ಪ್ರೇಕ್ಷಕರಿಗೆ ಯೋಚಿಸಲೂ ಟೈಮ್ ಕೊಡದಷ್ಟು ವೇಗವಾದ ನಿರೂಪಣೆ, ದೃಶ್ಯ ಜೋಡಣೆ ಇದೆ. ಪ್ರತಿಯೊಂದು ಫ್ರೇಮ್ ನಲ್ಲೂ ರಿಚ್ ನೆಸ್ ಇದೆ. ಪಾತ್ರಗಳ ವೈವಿಧ್ಯತೆ, ಒಂದೊಂದು ಪಾತ್ರಗಳ ಗುಣ ವಿಶೇಷಣಗಳು ಗಮನ ಸೆಳೆಯುವಂತಿದೆ. ಗಾನವಿ ಲಕ್ಷ್ಮಣ್ ರದು 'ಗಂಡಸ'ನ್ನೇ ಹೆದರಿಸುವ 'ಗಡಸು' ಪಾತ್ರ. ಇದುವರೆಗೆ ಬರೀ ಸಾಫ್ಟ್ 'ರೋಲ್' ಗಳಲ್ಲಿ ಕಾಣಿಸಿಕೊಂಡ ಇವರು ಇಂತಹಾ "ರೋಲ್ ಮಾಡಲ್ಲ" ಅಂದ್ಕೊಂಡ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿಸುವಂತೆ ಅಭಿನಯಿಸಿದ್ದಾರೆ. ಆದರೆ ಅವರ ಈ 'ರೋಲ್' ನೋಡಿದ ಎಲ್ಲಾ ಹೆಣ್ಮಕ್ಕಳೂ ಇವರನ್ನು 'ರೋಲ್ ಮಾಡೆಲ್' ಮಾಡ್ಕೊಂಡರೆ ಮಾತ್ರ ಗಂಡಂದಿರ ಕತೆ ಗೋವಿಂದ. ಹೊರಗೆ ಹಾರ್ಡ್ ವೇರ್, ಒಳಗೆ ಸಾಫ್ಟ್ ವೇರ್, "ಓ ಗಂಡಸ್ರೇ ಬಿವೇರ್" ಅನ್ನುವಂತ ಗುಣವಿರುವ ಪಾತ್ರದಲ್ಲಿ ಗಾನವಿ ಅಭಿನಯ ಸೂಪರ್. "ರತ್ನನ್ ಪ್ರಪಂಚ" ನಂತರ ಸಿನಿ ಪ್ರಪಂಚದಿಂದ ಕಾಣೆಯಾಗಿದ್ದ ಉಮಾಶ್ರೀಯವರು ಈ ಸಿನಿ"ಮಾ"ದ ಮೂಲಕ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡುವುದರ ಜೊತೆಗೆ ಅವರ "ಸರಸ"ಮಯ ಡೈಲಾಗ್ ಡೆಲಿವರಿ ಸ್ಟೈಲ್ ನಿಂದ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿದ್ದಾರೆ. 'ಮಾತು ಬೆಳ್ಳಿ ಮೌನ ಬಂಗಾರ' ಅನ್ನೋ ಹಾಗೆ ಬರೀ ಕಣ್ಣಲ್ಲೇ ಅಲ್ಲಲ್ಲ... ಕಲ್ಲಲ್ಲೇ ಜಜ್ಜಿ ಕೊಲ್ಲುವ, ಕನಕನ ಪಾತ್ರದಲ್ಲಿ ಅರುಣ್ ಸಾಗರ್ ಮಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ತಮ್ಮ ಅಭಿನಯದಿಂದ ಚಚ್ಚಿ ಬಿಸಾಕಿದ್ದಾರೆ. ಕೊನೆಯಲ್ಲಿ ಟ್ವಿಸ್ಟ್ ಕೊಡೋ ಒಮ್ಮೆ "ಮೈ ಮಾರಿ"ಕೊಳ್ಳುವ ಹೆಣ್ಣಾಗಿ, ಇನ್ನೊಮ್ಮೆ "ಮೈಯ್ಯಲ್ಲಿ ಮಾರಿ" ಬರಿಸಿಕೊಳ್ಳುವ ನಾರಿಯಾಗಿ ಶ್ವೇತಾ ಚೆಂಗಪ್ಪ ಈ ಸಿನಿಮಜಾಟಾಕೀಸಿನಲ್ಲಿ ರಾಣಿಯಂತೆ ಮೆರೆದಿದ್ದಾರೆ.
ಇನ್ನು ಶಿವಣ್ಣನ ವಿಷಯಕ್ಜೆ ಬಂದರೆ, ವೀರ, ಕರುಣ, ಶೃಂಗಾರ, ರೌದ್ರ, ಹಾಸ್ಯ, ಶಾಂತ, ಅದ್ಭುತ, ಭಯ, ಭೀಬತ್ಸದಂತಹ ನವರಸಗಳನ್ನೂ ಹೊಂದಿರುವ ಪಾತ್ರ ಇದು. ನೂರ ಇಪ್ಪತ್ತೈದರ ಮೈಲಿಗಲ್ಲಿಗೆ ಈ ವಿಶಿಷ್ಠ ಪಾತ್ರ ಜೋಡಿಯಾಗಿದೆ ಮತ್ತು ಎಂದಿನಂತೆ ಲೀಲಾಜಾಲವಾಗಿ ಆ ಪಾತ್ರ ನಿರ್ವಹಣೆಯನ್ನು ಅವರು ಮಾಡಿಯಾಗಿದೆ. ಕಲಾ ನಿರ್ದೇಶಕರು ಮತ್ತು ಪ್ರಸಾಧನ ವಿಭಾಗದವರ ಕೈಚಳಕದಲ್ಲಿ ಬೇರೆಯೇ ಲೋಕ ಮತ್ತು ಜನಸಮೂಹ ಸೃಷ್ಟಿಯಾಗಿದೆ. ಒಳಾಂಗಣ ದೃಶ್ಯಗಳೇ ಹೆಚ್ಚಿರುವ ಈ ಸಿನಿಮಾದಲ್ಲಿ ಸ್ವಾಮಿ ಗೌಡರ ಕ್ಯಾಮರಾ ಕೆಲಸ ಅದ್ಭುತವಾಗಿ ಮೂಡಿಬಂದಿದೆ. ಅರ್ಜುನ್ ಜನ್ಯ, ಹಾಡುಗಳಿಗಿಂತ ಹಿನ್ನಲೆ ಸಂಗೀತದಲ್ಲಿ ಮಿಂಚಿದ್ದಾರೆ.