ಭಾರತದ ನೈಟಿಂಗೇಲ್ ಇನ್ನಿಲ್ಲ..

* ಸರ್ಕಾರಿ ಗೌರವಗಳದೊಂದಿಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯ ಸಂಸ್ಕಾರ
* ರಾಷ್ಟ್ರಪತಿ ಕೋವಿಂದ್, ಮೋದಿ, ಅಮಿತ್ ಶಾ, ಬೊಮ್ಮಯಿ, ಮಾ ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಸಂತಾಪ
* ಸಂಗೀತ ಪ್ರಿಯರ ಪಾಲಿನ ಲತಾ ದೀದಿ ಇನ್ನಿಲ್ಲ
ಭಾರತ ರತ್ನ,ಗಾನ ಕೋಗಿಲೇ, ನೈಟಿಂಗೇಲ್, ಸಂಗೀತ ಪ್ರಿಯರ ಪಾಲಿನ ಲತಾ ದೀದಿ ಇನ್ನಿಲ್ಲ.. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಲತಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಲತಾ ನಮ್ಮನ್ನಗಲಿದ್ದಾರೆ ಎಂದು ಡಾ.ಪ್ರತಿತ್ ಸಮ್ದಾನಿ ಅವರು ಮಾಧ್ಯಮಕ್ಕೆ ಹೇಳಿದರು. ಲತಾ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದ್ದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ದೇಶದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದ್ದು, ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರವನ್ನು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.ಇಂದು ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಲತಾ, ದೀನಾನಾಥ್ ಮಂಗೇಶ್ಕರ್ ಸೇವಂತಿ ಮಂಗೇಶ್ಕರ್ ದಂಪತಿಯ ಪುತ್ರಿಯಾಗಿದ್ದು, ಲತಾ ಮಂಗೇಶ್ಕರ್ ಮೊದಲ ಹೆಸರು ಹೇಮಾ ಅಗಿದೆ. 13ನೇ ವಯಸ್ಸಿನಲ್ಲೇ ಹಾಡೋದಕ್ಕೆ ಪ್ರಾರಂಭಿಸಿದ್ದ ಲತಾರವರು ಹಿಂದಿಯಲ್ಲೇ ಸುಮಾರು 1000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಭಾರತದ 36 ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಗಾಯನದ ಚಾಪನ್ನು ಮೂಡಿಸಿದ್ದಾರೆ. ಕೆಲ ವಿದೇಶಿ ಭಾಷೆಗಳಲ್ಲಿಯೂ ಹಾಡು ಹಾಡಿದ್ದ ಲತಾ ನ್ಯಾಷನಲ್ ಫಿಲ್ಮ್ ಅವಾರ್ಡ್, ಬಿಎಫ್ ಜೆಎ ಅವಾರ್ಡ್, 2001ರಲ್ಲಿ ಭಾರತ ರತ್ನ, 1997ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ.