ದಿ ಕಾಶ್ಮೀರ್ ಫೈಲ್ಸ್........ಎಂಬ ಸಿನಿಮಾ ಸೃಷ್ಟಿಸುತ್ತಿರುವ ಭಾವನಾತ್ಮಕ ಅಲೆಯ ಸುತ್ತ......

ಭಾರತದ ವಿಭಜನೆಯ ಸಮಯದಲ್ಲಿ ಹಿಂದೂ ಮುಸ್ಲಿಂ ಹತ್ಯಾಕಾಂಡ, ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಆ ಸಂದರ್ಭದ ಚಿತ್ಪಾವನ ಬ್ರಾಹ್ಮಣರ ಹತ್ಯೆ, ಇಂದಿರಾಗಾಂಧಿ ಹತ್ಯೆ ಮತ್ತು ಆ ನಂತರದ ಸಿಖ್ ಹತ್ಯಾಕಾಂಡ, ಕಾಶ್ಮೀರದ ಪಂಡಿತರ ಮಾರಣಹೋಮ, ಗೋದ್ರಾ ಘಟನೆ ಮತ್ತು ಆ ಸಮಯದಲ್ಲಿ ಗುಜರಾತಿನ ಮುಸ್ಲಿಮರ ಹತ್ಯಾಕಾಂಡ,
 | 
kashmieer file

ಹಾಗೆಯೇ ಇತ್ತೀಚೆಗೆ ಜೈ ಭೀಮ್ ಸಿನಿಮಾ ಸೃಷ್ಟಿಸಿದ್ದ ವಿಷಾದನೀಯ ಅಲೆಯ ಒಳನೋಟ.......

" ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ " ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳು ಹಿನ್ನೆಲೆಯಲ್ಲಿ.....

ಇತಿಹಾಸ ವರ್ತಮಾನಕ್ಕೆ ಪಾಠವಾಗಬೇಕೆ ಹೊರತು ಭವಿಷ್ಯಕ್ಕೆ ಮಾರಕವಾಗಬಾರದು ಎಂಬ ಎಚ್ಚರಿಕೆಯಿಂದ.........

ಹೌದು ಕಾಶ್ಮೀರ ಫೈಲ್ಸ್ ಸಿನಿಮಾ ನೋಡುತ್ತಿರುವ ದೇಶಭಕ್ತಿಯ ಉತ್ತುಂಗದಲ್ಲಿರುವ ಜನರು ದುಃಖ ಆಕ್ರೋಶದಿಂದ ಭುಗಿಲೇಳುವ ಮಾತುಗಳನ್ನಾಡುತ್ತಿದ್ದಾರೆ.

ಜೈ ಭೀಮ್ ನೋಡಿದ ದೌರ್ಜನ್ಯಕ್ಕೊಳಗಾದವರು ಸಹ ನಕ್ಸಲೀಯ ಭಾವನೆಯ ಒಳ ಭೇಗುದಿಗೆ ಒಳಗಾಗಿದ್ದಾರೆ.

ಇತಿಹಾಸದ ಹತ್ಯಾಕಾಂಡಗಳನ್ನು ಜಾತಿ ಧರ್ಮ ಪ್ರದೇಶಗಳ ಸಂಕುಚಿತ ಮನೋಭಾವದಿಂದ ನೋಡದೆ ಸ್ವಾತಂತ್ರ್ಯ ಭಾರತದ ಈಗಿನ ಸಂದರ್ಭದಲ್ಲಿ ವಿಶಾಲ ಅರ್ಥದಲ್ಲಿ ನೋಡಿದಾಗ ಮಾತ್ರ ಒಂದು ಸಮಗ್ರ ಚಿಂತನೆ ಮೂಡಲು ಸಾಧ್ಯ........

ಈ ನೆಲದಲ್ಲಿ ಕೇವಲ ಕಾಶ್ಮೀರ ಪಂಡಿತರ ಹತ್ಯಾಕಾಂಡ ಮಾತ್ರ ನಡೆದಿಲ್ಲ. ಶತ ಶತಮಾನಗಳಿಂದ ಸಾಕಷ್ಟು ಕಗ್ಗೊಲೆಗಳಿಗೆ ಈ ನೆಲ ಸಾಕ್ಷಿಯಾಗಿದೆ.

ತುಂಬಾ ಹಿಂದಿನ ಘಟನೆಗಳು ಬೇಡ. ಸ್ವಾತಂತ್ರ್ಯ ನಂತರದಲ್ಲಿ ನಡೆದ ದೊಡ್ಡ ಹತ್ಯಾಕಾಂಡಗಳನ್ನು ಒಮ್ಮೆ ಅವಲೋಕಿಸಿದರೆ....

ಪ್ರಾರಂಭದಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಹಿಂದೂ ಮುಸ್ಲಿಂ ಹತ್ಯಾಕಾಂಡ, ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಆ ಸಂದರ್ಭದ ಚಿತ್ಪಾವನ ಬ್ರಾಹ್ಮಣರ ಹತ್ಯೆ, ಇಂದಿರಾಗಾಂಧಿ ಹತ್ಯೆ ಮತ್ತು ಆ ನಂತರದ ಸಿಖ್ ಹತ್ಯಾಕಾಂಡ, ಕಾಶ್ಮೀರದ ಪಂಡಿತರ ಮಾರಣಹೋಮ, ಗೋದ್ರಾ ಘಟನೆ ಮತ್ತು ಆ ಸಮಯದಲ್ಲಿ ಗುಜರಾತಿನ ಮುಸ್ಲಿಮರ ಹತ್ಯಾಕಾಂಡ, ಮುಂಬಯಿಯ ಬಾಂಬ್ ಬ್ಲಾಸ್ಟ್ ಹೀಗೆ ಇಲ್ಲಿ ನೆನಪಾಗದ ಇನ್ನೂ ಸಾಕಷ್ಟು ಘಟನೆಗಳಿವೆ....

ಇಷ್ಟು ಮಾತ್ರವಲ್ಲದೇ,
ಆಂಧ್ರಪ್ರದೇಶದ ಕರಮಚೇಡು, ಕರ್ನಾಟಕದ ಕಂಬಾಲಪಲ್ಲಿ, ಬದನವಾಳುವಿನ ದಲಿತ ಕುಟುಂಬಗಳ ಹತ್ಯಾಕಾಂಡ, ಮಹಾರಾಷ್ಟ್ರದ ಖೈರ್ಲಾಂಜೆ, ಉತ್ತರ ಪ್ರದೇಶದ ಉನ್ನಾವ್ ಮತ್ತು ಇತ್ತೀಚಿನ ರೈತರ ಮೇಲೆ ಜೀಪು ಹತ್ತಿಸಿದ ಲಿಖಿಂಪುರ್ ಖೇರಿ ಪ್ರಕರಣ ಹೀಗೆ ಅನೇಕ ರಾಜ್ಯಗಳಲ್ಲಿ ಇದಕ್ಕಿಂತ ದೊಡ್ಡ ಹತ್ಯಾಕಾಂಡಗಳು ಸೇರಿ ಎಲ್ಲವೂ ಅದನ್ನು ಗಮನಿಸಿದಾಗ ಆಕ್ರೋಶ ಉಕ್ಕುತ್ತದೆ......

ಈ ಹತ್ಯಾಕಾಂಡಗಳಿಗೆ ಬಹುಮುಖ್ಯ ಕಾರಣ ಧಾರ್ಮಿಕ - ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ. ಈ ಘಟನೆಗಳು ನಡೆಯುವಾಗ ಆಡಳಿತ ನಡೆಸುತ್ತಿದ್ದ ಮತ್ತು ನಡೆಸುತ್ತಿರುವ ಪಕ್ಷಗಳು ಮತ್ತು ಸರ್ಕಾರಗಳು ಇದನ್ನು ತಡೆಯುವಲ್ಲಿ ಮತ್ತು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅದರ ಪರಿಣಾಮ ಈ ಭೀಕರ ಹತ್ಯಾಕಾಂಡಗಳು. ಇವುಗಳಿಗೆ ಯಾವುದೇ ಸಮರ್ಥನೆ ಇಲ್ಲ. ದಯವಿಟ್ಟು ಇವುಗಳ ಬಗ್ಗೆ ಪ್ರತಿಕ್ರಿಯಿಸುವಾಗ ಭಾರತದ ಸಮಗ್ರ ಚಿತ್ರಣ ಮತ್ತು ಸಮಗ್ರ ಚಿಂತನೆ ನಿಮ್ಮದಾಗಿರಲಿ.

ನೆನಪಿಡಿ ಇತಿಹಾಸದ ಹತ್ಯಾಕಾಂಡಗಳು ವರ್ತಮಾನದ ಹತ್ಯಾಕಾಂಡಗಳಿಗೆ ನೆಪವಾಗಬಾರದು. ಬದಲಾಗಿ ಆ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆಯ ಪಾಠವಾಗಬೇಕು......

ಸಿನಿಮಾ ಒಂದು ಮನರಂಜನಾ ಉದ್ಯಮ. ಬಣ್ಣದ ಲೋಕ. ಎಷ್ಟೇ ವಾಸ್ತವಕ್ಕೆ ಹತ್ತಿರವಿದ್ದರೂ ಅದೊಂದು ಕಾಲ್ಪನಿಕ ಭಾವನಾತ್ಮಕ ಪ್ರಚೋದನಕಾರಿ ಆಗುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನಾವು ಹೆಚ್ಚು ನಿಯಂತ್ರಿತ ಮನೋಭಾವ ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ಉಕ್ರೇನ್ ಜನರು ಎದುರಿಸುತ್ತಿರುವ ಪರಿಸ್ಥಿತಿ ನಮಗೂ ಬರಬಹುದು....

ಇತಿಹಾಸವನ್ನು ಬದಲಿಸಲಾಗದು. ಅದು ನಡೆದು ಹೋಗಿದೆ. ಆದರೆ ವರ್ತಮಾನ ನಮ್ಮ ಕೈಲಿದೆ. ಇದನ್ನು ಎಷ್ಟು ಉತ್ತಮವಾಗಿ ನಾವು ನಿರ್ವಹಿಸುತ್ತೇವೆಯೋ ಅಷ್ಟು ಒಳ್ಳೆಯದಾಗಿ ಭವಿಷ್ಯ ರೂಪಗೊಳ್ಳುತ್ತದೆ ಎಂಬ ಪ್ರಜ್ಞೆ ಇರಲಿ.......

ಹೌದು, ಇತಿಹಾಸದಲ್ಲಿ ಮರೆಯಲಾಗದ ನೋವುಗಳು ಎಲ್ಲರಿಗೂ ಇದೆ. ಈಗ ಅದಕ್ಕೆಲ್ಲಾ ಸೇಡು ತೀರಿಸಿಕೊಳ್ಳಲು ಸಾಧ್ಯವೇ ? ಅದು ಸರಿಯೇ ? ಎಂಬ ಪ್ರಶ್ನೆ ಕೇಳಿಕೊಳ್ಳಿ.......

" ಕಣ್ಣಿಗೆ ಇನ್ನೊಂದು ಕಣ್ಣು ತೆಗೆಯುವುದಾದರೆ, ಇಡೀ ಜಗತ್ತೇ  ಕುರುಡಾಗಿ ಕೊನೆಗೊಳ್ಳುವುದು " ಎಂಬ ಮಹಾತ್ಮ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಳ್ಳಿ.........

ದಯವಿಟ್ಟು ರಾಜಕಾರಣಿಗಳ - ಎಲ್ಲಾ ಧರ್ಮಗಳ ಮತಾಂಧರ ದಾಳಗಳಾಗುವುದು ಬೇಡ. ಮೇಲೆ ಹೇಳಿದ ರೀತಿಯ ಅತ್ಯಂತ ಅಮಾನವೀಯ ಹತ್ಯಾಕಾಂಡಗಳು ಮುಂದೆ ನಡೆಯದಂತೆ ನೋಡಿಕೊಳ್ಳೋಣ........

ಸಿನಿಮಾ ಒಂದು ಸಿನಿಮಾ ಮಾತ್ರ. ಅದು ಒಂದು ಕ್ರಿಯಾತ್ಮಕ ಚಲನಚಿತ್ರ  ಮಾತ್ರ. ಅದು ನಿರ್ದೇಶಕನ ಕಲ್ಪನೆಯಲ್ಲಿ ಮೂಡಿದ ಭಾವನೆಗಳು ಮಾತ್ರ. ಅದು ನಿರ್ಮಾಪಕನ ಲಾಭದ ವ್ಯಾಪಾರ ಮಾತ್ರ. ಅದು ಛಾಯಾಗ್ರಾಹಕನ ಕ್ಯಾಮರಾ ಕೈಚಳಕ ಮಾತ್ರ. ಅದು ಸಂಗೀತಗಾರನ ವಾದ್ಯಗಳ ಧ್ನನಿ ತರಂಗಗಳು ಮಾತ್ರ. ಅದು ಸಂಕಲನಕಾರನ ಸಮಯ ಪ್ರಜ್ಞೆಯ ಜೋಡಣೆಯ ತಂತ್ರಜ್ಞಾನ ಮಾತ್ರ, ಸಿನಿಮಾ ಪ್ರೇಕ್ಷಕರ ಭ್ರಮೆ ಸೃಷ್ಟಿಸುವ ಒಂದು ಕಲಾ ಮಾಧ್ಯಮ ಮಾತ್ರ.....

ನಾವು ನೀವು ಅದರ ಬಲೆಯೊಳಗೆ ಬೀಳದಿರೋಣ.
ಈಗಾಗಲೇ ಹಾಳಾಗಿರುವ ಸಾಮಾಜಿಕ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಒಂದು ಸುಂದರ ನಾಗರಿಕ ಸಮಾಜವನ್ನು ಕಟ್ಟೋಣ. ಅದು ಸಿನಿಮಾ ರೂಪದ ಭ್ರಮೆ ಆಗುವುದು ಬೇಡ. ನಮ್ಮ ನಿಮ್ಮೆಲ್ಲರ ವಾಸ್ತವದ ಅರಿವಿನ ಸಮಾಜವಾಗಿರಲಿ ಎಂದು ಆಶಿಸುತ್ತಾ......

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,