ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ದಚ್ಚು ಕರೆ
ಲಾಕ್ ಡೌನ್ ಹಿನ್ನೆಲೆ ಪ್ರಾಣಿಗಳ ನೆರವಿಗೆ ಧಾವಿಸುವಂತೆ ಕರೆ ನೀಡಿದ ದರ್ಶನ್
ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಸಮಸ್ಯೆ ಎದುರಾಗಿದೆ. ಲಾಕ್ ಡೌನ್ ನಿಂದಾಗಿ ಮೃಗಾಲಯಗಳ ಬಾಗಿಲುಗಳು ಮುಚ್ಚಿವೆ. ಮರಗಾಲಯಗಳಿಗೆ ಪ್ರವಾಸಿಗರಿಂದ ಬರುತ್ತಿದ್ದ ಆದಾಯ ನಿಂತುಹೋಗಿದೆ. ಇದರಿಂದ ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಈ ಹಿನ್ನೆಲೆ ಪ್ರಾಣಿ ಪ್ರಿಯಾ ಹಾಗೂ ಮೈಸೂರು ಮೃಗಾಲಯದ ರಾಯಬಾರಿಯೂ ಆಗಿರುವ ನಟ ದರ್ಶನ್, ಪ್ರಾಣಿಗಳ ನೆರವಿಗೆ ಧಾವಿಸುವಂತೆ ಕರೆ ನೀಡಿದ್ದಾರೆ.
ಈಗಾಗಲೆ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್ ಅವರು, ಅನಕೂಲಸ್ಥರು ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಹತ್ತಿರದಲ್ಲಿರುವ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕೇಳಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 9 ಮೃಗಾಲಯಗಳಿವೆ. ಇವುಗಳಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳಿವೆ. ಜನರು ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ವರ್ಷಕ್ಕೆ ಒಂದು ಜೊತೆ ಲವ್ ಬರ್ಡ್ಸ್ ಗೆ 1 ಸಾವಿರ, ಒಂದು ಹುಲಿಗೆ 1 ಲಕ್ಷ ಹಾಗೂ ಆನೆಗೆ 1.17 ಲಕ್ಷ ರೂಪಾಯಿಗಳನ್ನು ನೀಡಿ ದತ್ತು ಪಡೆಯಬಹುದು. ನೀವು ದತ್ತು ಪಡೆಯಲು ನೀಡುವ ಹಣ ಒಂದು ವರ್ಷದವರೆಗೆ ಅವುಗಳ ನಿರ್ವಹಣೆಗೆ ಅನುಕೂಲವಾಗಲಿದೆ.
ಆದ್ದರಿಂದ, ಪ್ರಾಣಿ ಸಂಕುಲವನ್ನು ಉಳಿಸಿ ಮೃಗಾಲಯಗಳನ್ನು ಬೆಳೆಸಲು ಎಲ್ರೂ ಕೈ ಜೋಡಿಸಿ ZOO of Karnataka APP ಮುಖಾಂತರ ಅಥವಾ ಮೃಗಾಲಯಗಳಿಗೆ ಭೇಟಿ ನೀಡಿ ಪ್ರಾಣಿಗಳನ್ನು ದತ್ತು ಪಡೆಯಬಹುದು, ಇದು ತುಂಬಾ ಒಳ್ಳಯ ಕೆಲಸ, ಒಳ್ಳೆಯ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ದರ್ಶನ್ ಹೇಳಿದ್ದಾರೆ.