ಬಿಗ್ ಬಾಸ್ 8ನೇ ಆವೃತ್ತಿ ಮತ್ತೆ ಆರಂಭ
ಸುಳಿವು ನೀಡಿದ ಪರಮೇಶ್ವರ ಗುಂತ್ಕಲ್
ಬೆಂಗಳೂರು: ಕನ್ನಡ ಬಿಗ್ ಬಾಸ್ ವೀಕ್ಷಿಸುವ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೊರೋನಾ ಎರಡನೇ ಅಲೆಯಿಂದ ಸ್ಥಗಿತಗೊಂಡಿದ್ದ ಕನ್ನಡದ ಕಿರುತೆರೆಯ ಬಿಗ್ ಬಾಸ್ ಶೋನ 8ನೇ ಆವೃತ್ತಿ ಶೀಗ್ರದಲ್ಲೇ ಆರಂಭವಾಗಲಿದೆ.
ಈ ಬಗ್ಗೆ ಸೂಚನೆ ನೀಡಿರುವ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್, ಬಾಕಿ ಉಳಿದಿರುವ ಬಿಗ್ ಬಾಸ್ ಆವೃತ್ತಿಯನ್ನು ಮತ್ತೆ ಮುಂದುವರೆಸುವುದಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ. ಇದೊಂಥರಾ ಎರಡನೇ ಇನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನಿಂಗ್ಸಿನ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು ಎಂದು ಬರೆದಿದ್ದಾರೆ
ಎರಡನೇ ಇನಿಂಗ್ಸಿನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ ಎಂದು ವಿವರಿಸಿದ್ದಾರೆ
ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ ಎಂದು ತಿಳಿಸಿದ್ದಾರೆ.