ಪ್ರತೀ ದಿನ ಹೋಮ ಹವನ ಮಾಡಿ ಕೊರೋನಾ ಓಡಿಸಿ!

ನಟಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅಪ್ರಬುದ್ದ ಹೇಳಿಕೆ

 | 
Hema malini doing havana with her daughter

ನವದೆಹಲಿ: ಇಂಡಿಯನ್ ಮೆಡಿಕಲ್ ಅಶೋಷಿಯೇಷನ್ ಮತ್ತು ಯೋಗ ಗುರು ಬಾಬಾ ರಾಮ್ ದೇವ್ ನಡುವೆ ಆಲೋಪತಿಕ್ ಮೆಡಿಸಿನ್ ಗೆ ಸಂಬಂಧಿಸಿದಂತೆ ವಿವಾದ ಸದ್ದು ಮಡುತ್ತಿರುವಾಗಲೇ ಬಾಲಿವುಡ್ ನಟಿ ಹಾಗೂ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಕೊರೋನಾ ನಿಯಂತ್ರಣಕ್ಕೆ ಅವೈಜ್ಞಾನಿಕ ಸಲಹೆ ನೀಡುವ ಮೂಲಕ ವಿವಾದ ಸೃಷ್ಟಸಿದ್ದಾರೆ.

ಮನೆಯಲ್ಲಿ ಪ್ರತಿದಿನ ಹೋಮ ಹವನ ಮಾಡುವುದರಿಂದ ಮನುಷ್ಯ ಕೊರೋನಾ ವೈರಸ್ ಹಾಗೂ ಇನ್ನಿತರೆ ಯಾವುದೇ ರೋಗಗಳಿಂದ ದೂರ ಇರಬಹುದು ಎಂಬ ವಿವಾದಾತ್ಮಕ ಅಭಿಪ್ರಾಯವನ್ನು ವಿಶ್ವ ಪರಿಸರ ದಿನದಂದು ವ್ಯಕ್ತಪಡಿಸಿದ್ದು, ಪ್ರತಿದಿನ ಹವನ ಮಾಡುವಂತೆ ಜನರಲ್ಲಿ ಮನವಿ ಮಾಡಿರುವ ಹೇಮಾಮಾಲಿನಿ, ಪ್ರಕೃತಿಯನ್ನು ಶುದ್ದೀಕರಿಸುವುದರ, ಜೊತೆಗೆ ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಹಾಗೆ ಹೋಮ- ಹವನಕ್ಕೆ ಯಾವೆಲ್ಲಾ ಪದಾರ್ಥಗಳನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದು, ಬೇವಿನ ಎಲೆ, ತುಪ್ಪ, ಲವಂಗ, ಸಾಸಿವೆ, ಉಪ್ಪು ಮತ್ತು ಧೂಪ-ಇಷ್ಟು ಸಾಮಾಗ್ರಿಗಳನ್ನು ಹವನಕ್ಕೆ ಬಳಸುವಂತೆ ನಟಿ ಹೇಮಾ ಮಾಲಿನಿ ಸಲಹೆ ನೀಡಿದ್ದಾರೆ.

ನಾನು ಹಲವಾರು ವರ್ಷಗಳಿಂದ ಪೂಜೆಯಾದ ಬಳಿಕ ಹವನ ಮಾಡುತ್ತಿದ್ದೇನೆ. ಜೊತೆಗೆ ಈ ಕೊರೋನಾ ವೈರಸ್​ ಹರಡಲು ಶುರುವಾದಾಗಿನಿಂದ ಮನೆಯಲ್ಲಿ ದಿನಕ್ಕೆ ಎರಡು ಬಾರಿ ಹವನ ಮಾಡುತ್ತಿದ್ದೇನೆ. ಇದು ಪರಿಸರವನ್ನು ಸ್ವಚ್ಛವಾಗಿರಿಸುವುದು ಮಾತ್ರವಲ್ಲದೇ, ಶುದ್ಧತೆಯ ಪ್ರಜ್ಞೆಯನ್ನೂ ಸಹ ನೀಡುತ್ತದೆ. ಜೊತೆಗೆ ಕೊರೋನಾ ವೈರಸ್​​ನಂತಹ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ ಎಂದು ಹೇಳಿದ್ದಾರೆ.

ಮತ್ತೊಂದು ವಿಡಿಯೋ ಪೋಸ್ಟ್ ಮಾಡಿರುವ ಹೇಮಾ ಮಾಲಿನಿ, ಹವನ ಯುಗ-ಯುಗಗಳಿಂದಲೂ ನಕಾರಾತ್ಮಕತೆಯನ್ನು ತೊಡೆದು ಹಾಕುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಇಂದು ಇಡೀ ಜಗತ್ತು ಸಾಂಕ್ರಾಮಿಕ ರೋಗ ಹಾಗೂ ಪ್ರಕೃತಿ ವಿಕೋಪಗಳ ಹೊಡೆತಕ್ಕೆ ಸಿಕ್ಕಿ ನಲುಗಿದೆ. ಪರಿಸರ ದಿನದಂದು ಮಾತ್ರ ಪ್ರಕೃತಿಯನ್ನು ಸಂರಕ್ಷಿಸುವುದಲ್ಲ. ಪ್ರತೀ ದಿನ ಪರಿಸರ ಸಂರಕ್ಷಣೆ ಮಾಡಬೇಕಿದೆ. ಹೀಗಾಗಿ ಎಲ್ಲರೂ ನಿತ್ಯ ನಿಮ್ಮ ಮನೆಗಳಲ್ಲಿ ಹವನ ಮಾಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಇದಕ್ಕೆ ಕೆಲ ನೆಟ್ಟಿಗರು ಹೇಮಾ ಮಾಲಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.