'ಸಂಜು ವೆಡ್ಸ್ ಗೀತಾ -2' ಗ್ರ್ಯಾಂಡ್ ಲಾಂಚ್

ಶ್ರೀನಗರ ಕಿಟ್ಟಿ, ರಚಿತಾ ರಾಂ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಮುಹೂರ್ತ ದೃಶ್ಯಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು
 | 
sanjuweds geeta

‌೧೨ ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-೨ ಮೂಡಿಬರುತ್ತಿದೆ. ನಾಗಶೇಖರ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಇರುತ್ತಾರೆ. ಫಾರ್ ಎ ಛೇಂಜ್ ರಮ್ಯಾ ಬದಲು ಇಲ್ಲಿ ರಕ್ಷಿತಾ ರಾಮ್ ನಾಯಕಿಯಾಗಿದ್ದಾರೆ. ಅದಕ್ಕೆ ನಾಗಶೇಖರ್ ಕಾರಣವನ್ನೂ ನೀಡಿದರು. ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ಸಂಜು ವೆಡ್ಸ್ ಗೀತಾ-೨ ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ಆರಂಭದಲ್ಲಿ ಹಿಂದಿನ ಚಿತ್ರದ ಎವಿ ಪ್ರದರ್ಶನ ಹಾಗೂ ಆ ಚಿತ್ರದ ಟೈಟಲ್ ಟ್ರ್ಯಾಕ್ ಗೆ ನೃತ್ಯ ಮಾಡುವ ಮೂಲಕ ಮೆಲುಕು ಹಾಕಲಾಯಿತು.

ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ

ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ

ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗಶೇಖರ್, ನಾನು ಸೀರಿಯಲ್ ಗಳಲ್ಲಿ ಆಕ್ಟ್ ಮಾಡ್ತಿರುವಾಗ, ಕಪ್ಪಗಿರುವ ಈ ಹುಡುಗನನ್ನು ಕರೆದು ತಮ್ಮ ನಿರ್ದೇಶನದ ನಿನಗಾಗಿ ಚಿತ್ರದಲ್ಲಿ ಅವಕಾಶ ನೀಡಿದವರು ಎಸ್ ಮಹೇಂದರ್, ಅವರು ಇಂದು ನಮ್ಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ತುಂಬಾ ಖುಷಿಯಾಗಿದೆ. ಈ ಸಿನಿಮಾವನ್ನು ೫ ವರ್ಷಗಳ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ. ರಮ್ಯ ಅವರು ಈ ಚಿತ್ರದಲ್ಲೂ ಆಕ್ಟ್ ಮಾಡಬೇಕಿತ್ತು. ಅದರೆ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್, ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು‌ ಮಾಡಿದವರು. ನನ್ನ ಚಿತ್ರದಲ್ಲಿ ಈ‌ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ. ಇನ್ನು ಹಿಂದಿನ ಚಿತ್ರದಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಚಿತ್ರದಲ್ಲಿ ಕಥೆಯ ಜೊತೆ ಹಾಡುಗಳಿಗೂ ಜಾಸ್ತಿ ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಅವರಿಗೆ ರಾತ್ರಿ ೧೨ ಗಂಟೆಗೆ ಕಾಲ್ ಮಾಡಿ ಹಾಡುಗಳ ಸನ್ನಿವೇಶ ವಿವರಿಸಿದ್ದೇನೆ. ಅವರು ಸೂಪರ್ ಸಾಂಗ್ಸ್ ಕೊಟ್ಟಿದ್ದಾರೆ. ಅದ್ಭುತವಾದ ೫ ಹಾಡುಗಳು ಮೂಡಿಬಂದಿವೆ. ಇಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದರು.

ಶ್ರೀನಗರ ಕಿಟ್ಟಿ, ರಚಿತಾ ರಾಂ ಅಭಿನಯದ ಹಾಡಿನೊಂದಿಗೆ ಚಿತ್ರೀಕರಣ ಪ್ರಾರಂಭಿಸಲಾಯಿತು. ಮುಹೂರ್ತ ದೃಶ್ಯಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ನಾಗಶೇಖರ್, ರಾಜರತ್ನನಿಗೆ ಗೌರವ ಸಲ್ಲಿಸಿದ್ದಾರೆ.

ನಿರ್ಮಾಕ ಚಲುವಾದಿ ಕುಮಾರ್ ಮಾತನಾಡಿ ಹಿಙದಿನ ಚಿತ್ರಗಳಲ್ಲಿ ನಾಗಶೇಖರ್ ಅವರ ವರ್ಕ್ ನೋಡಿದ್ದೇನೆ. ಈ ಚಿತ್ರದ ಬಗ್ಗೆ ೫ ವರ್ಷಗಳ ಹಿಂದೆಯೇ ಮಾತಾಡಿದ್ವಿ, ಕಥೆ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ ೧೨ ವರ್ಷವಾದರೂ ಹಾಡು, ಕಥೆ ಜೀವಂತವಾಗಿದೆ ಎಂದರೆ ಅದಕ್ಕಿರುವ ಜನಪ್ರಿಯತೆ ಕಾರಣ ಎಂದರು. ಮತ್ತೊಬ್ಬ‌ ನಿರ್ಮಾಪಕ ನಾರಾಯಣ ಎಂ.ಸಿ. ಮಾತನಾಡಿ ನನಗೆ ಬಹಳ ಇಷ್ಟವಾದ ಟೀಂ ಇದು. ಮೊದಲ ಚಿತ್ರಕ್ಕಿಂತ ಈ ಚಿತ್ರ, ಹೆಚ್ಚು ಜನಪ್ರಿಯವಾಗುವ ನಂಬಿಕೆಯಿದೆ ಎಂದರು.

ನಾಯಕಿ ರಚಿತಾ ಮಾತನಾಡಿ ಲಾಂಚ್ ಇವೆಂಟ್ ಇಷ್ಟೊಂದು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ನಾಗಶೇಖರ್ ಅವರ ಜೊತೆ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ. ಚಿತ್ರದ ಬಗ್ಗೆ ಅವರಿಗೆ ಡೆಡಿಕೇಶನ್ ಜಾಸ್ತಿ, ಅದನ್ನು ಫೋಟೋಶೂಟ್ ಸಮಯದಲ್ಲೇ ನೋಡಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂದರು.

ನಾಯಕ ಕಿಟ್ಟಿ ಮಾತನಾಡಿ ನಾಗಶೇಖರ್ ಚಿತ್ರದ ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ನನ್ನ ಲ್ಯಾಂಡ್ ಮಾರ್ಕ್ ಸಿನಿಮಾಗಳಲ್ಲಿ ಸಂಜು ವೆಡ್ಸ ಗೀತಾ ಒಂದು. ಅದ್ಭುತವಾದ ಪ್ರೇಮಕಥೆಯೊಂದಿಗೆ ಮತ್ತೆ ಬರುತ್ತೇವೆ.

ಮೊದಲ ಚಿತ್ರಕ್ಕಿಂತ ಈ ಚಿತ್ರದ ಪಾತ್ರ ಇನ್ನೂ ಚೆನ್ನಾಗಿದೆ. ರಚಿತಾ ರಾಮ್ ಅವರ ಜೊತೆ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ ಎಂದರು. ನಂತರ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಿತಿ ಕವಿರಾಜ್ ಚಿತ್ರದ ಕುರಿತಂತೆ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ್ದ ಅಭಿಷೇಕ್ ಅಂಬರೀಶ್ ಮಾತನಾಡಿ ನಾಗಶೇಖರ್ ಅದ್ಭುತವಾದ ತಂತ್ರಜ್ಞ ಎಂದು ಹೇಳಿದರು.

ಮಂಜುನಾಥ್ ಐಎಎಸ್. ನಿರ್ಮಾಪಕ ಕಾರ್ತಿಕ್ ಗೌಡ, ನಟ ಆದಿತ್ಯ, ಮಾಜಿ ಎಂ.ಎಲ್.ಎ.ಬಾಲರಾಜ್ ನಾಗತಿಹಳ್ಳಿ, ಚಂದ್ರಶೇಖರ್, ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಿರ್ಮಾಪಕ ಜಾಕ್ ಮಂಜು ಅವರು ಈ ಚಿತ್ರವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದ್ದಾರೆ.