ಸಂಚಾರಿ ವಿಜಯ್ ಅಪಘಾತದ ವಿಷಯ ತಿಳಿದು ಕೂಡಲೇ ನೆರವಿಗೆ ನಿಂತ ಕಿಚ್ಚ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕಿಚ್ಚ ಸುದೀಪ್ ಅವರು ಸಹಾಯಸ್ತ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ 12 ಶನಿವಾರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಅಪಘಾತವಾಗಿತ್ತು. ಕೂಡಲೇ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವಿಜಯ್ ಅವರ ಪರಿಸ್ಥಿತಿ ತುಂಬ ಚಿಂತಾಜನಕವಾಗಿತ್ತು. ಸುದೀಪ್ ಕೂಡಲೇ ಅಪೋಲೋ ಆಸ್ಪತ್ರೆ ವೈದ್ಯರಿಗೆ ಪೋನ್ ಮಾಡಿ ಶಸ್ತ್ರ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ ಹಿನ್ನೆಲೆ ವಿಜಯ್ ಅವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ಸಿಗಲು ಸಾಧ್ಯವಾಯ್ತು ಎಂದು ಹೇಳಲಾಗುತ್ತಿದೆ.
ಭಾನುವಾರ ರಾತ್ರಿ ವಿಜಯ್ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆಯಿಂದ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ. ಅದರ ಪ್ರಕಾರ ವಿಜಯ್ ಅವರ ಸ್ಥಿತಿ ಇನ್ನೂ ಗಂಭೀರವಾಗೇ ಇದೆ. ಆಸ್ಪತ್ರೆಗೆ ಕರೆತಂದಾಗ ಮೆದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ವಿಜಯ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ರಕ್ತಸ್ರಾವ ತೆಗೆಯಲಾಗಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಜೀವ ರಕ್ಷಕ ವಿಧಾನದ ಮೂಲಕ, ನ್ಯೂರೋ ಐಸಿಯುನಲ್ಲಿ ಇದ್ದಾರೆ. ನಾವು ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಲಾಗಿದೆ.