ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅಮೆರಿಕ ರಾಯಭಾರ ಕಚೇರಿ

ಕನ್ನಡದಲ್ಲೇ ಟ್ವೀಟ್ ಮಾಡಿ ಕಂಬನಿ ಮಿಡಿದ ಅಮೆರಿಕ ರಾಯಭಾರ ಕಚೇರಿ

 | 
sanchari vijay and Us Embassy Image

ಬೆಂಗಳೂರು: ಬೈಕ್ ಅಪಘಾತದಲ್ಲಿ ದುರಂತ ಅಂತ್ಯಕ್ಕೀಡಾದ ಖ್ಯಾತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಅಮೆರಿಕ ರಾಯಭಾರ ಕಚೇರಿಯೂ ಸಹ ಸಂತಾಪ ವ್ಯಕ್ತಪಡಿಸಿದೆ.

ಈ ಬಗ್ಗೆ ವಿಶೇಷವಾಗಿ ಕನ್ನಡಲ್ಲಿಯೇ ಟ್ವೀಟ್ ಮಾಡಿರುವ ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ #Pride ತಿಂಗಳ ಆಚರಣೆಯ ಅಂಗವಾಗಿ LGBTQi+ (ಲೈಂಗಿಕ ಅಲ್ಪಸಂಖ್ಯಾತರು) ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ 'ನಾನು ಅವನಲ್ಲ… ಅವಳು' ಪ್ರದರ್ಶನ-ಸಂವಾದದಲ್ಲಿ ಭಾಗಿಯಾಗಿದ್ದ ಸಂಚಾರಿ ವಿಜಯ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದೆ.

ಅಮೆರಿಕ ರಾಯಭಾರ ಕಚೇರಿಯ ಈ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಕನ್ನಡದ ನಟನಿಗೆ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ವಿಜಯ್ ಅವರ ಸ್ವಗ್ರಾಮವಾಗಿದ್ದು, ಪಂಚನಹಳ್ಳಯಲ್ಲಿ ಸಕಲ ಸರ್ಕಾರ ಗೌರವಗಳೊಂದಿಗೆ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅವರ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.