3000 ಸಿನೆಮಾ ಕಾರ್ಮಿಕರಿಗೆ ಧನಸಹಾಯ ನೀಡಲು ಯಶ್ ನಿರ್ಧಾರ

ತಲಾ 5000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ ರಾಕಿಂಗ್ ಸ್ಟಾರ್

 | 
Rocking star yash

ಬೆಂಗಳೂರು: ಕೊರೋನಾದಿಂದ ಲಾಕ್ ಡೌನ್ ಮಾಡಿದ ಹಿನ್ನೆಲೆ ಸಿನೆಮಾ ರಂಗದ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿವೆ. ಇದರಿಂದ ಸಿನೆಮಾ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಕೊರೋನಾದಿಂದ ಸಂಕಷ್ಟಕ್ಕೊಳಗಾಗಿರುವ ಸಿನಿಮಾ ಕಲಾವಿದರು, ತಂತ್ರಜ್ಞರ ಮತ್ತು ಕಾರ್ಮಿಕರು ನೆರವಿಗೆ ರಾಕಿಂಗ್​ ಸ್ಟಾರ್​ ಯಶ್ ಧಾವಿಸಿದ್ದಾರೆ.

ತಮ್ಮ ಕೈಲಾದ ಸೇವಯನ್ನು ಮಾಡಲು ಮುಂದಾಗಿರುವ ಅವರು ಸುಮಾರು 3,000 ಸಿನೆಮಾ ಕಲಾವಿದರು, ತಂತ್ರಜ್ಞರ ಮತ್ತು ಕಾರ್ಮಿಕರ ತಲಾ 5,000 ರೂಪಾಯಿಯಂತೆ ಬರೊಬ್ಬರಿ ಒಂದೂವರೆ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ.

ಈ ಕುರಿತ ತಮ್ಮ ನಿಲುವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಣ್ಣಿಗೆ ಕಾಣದ ವೈರಸ್‌ ಮನುಷ್ಯನ ಬದುಕನ್ನು ಹೆಚ್ಚುಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ. ಹೌದು. ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಚಿತ್ರರಂಗದ 21 ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3,000ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ಹಣವನ್ನ ತನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದ್‌ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್‌ ಅವರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್‌ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ’ ಎಂದು ಯಶ್‌ ಪತ್ರದ ಮೂಲಕ ತಿಳಿಸಿದ್ದಾರೆ.

ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುವುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ, ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎನ್ನುವುದು ನನ್ನ ಆಶಯ’ ಎಂದು ಬರೆದಿದ್ದಾರೆ.