ಹಸಿವು, ಸಾವುಗಳ ಸೂತಕದ ನಡುವೆ ಹೀಗೂ ಒಂದು ವಿಶ್ಲೇಷಣೆ!!
ಸಂಕಟದಲ್ಲೂ ವಿಕೃತವಾಗಿ ನಡೆದುಕೊಳ್ಳುವ ಕ್ರೌರ್ಯ, ಅಸ್ತಿತ್ವವನ್ನು ಅಲುಗಾಡಿಸುವ ಪ್ರಶ್ನೆಗಳು...
ಮನೆಮನೆಯ ಬಾಗಿಲನ್ನು ತಟ್ಟಿರುವ ಸಾವಿನ ನೋವು, ಇಂತಹ ಸಂಕಟದ ಗಳಿಗೆಗಳಲ್ಲೂ ವಿಕೃತವಾಗಿ ನಡೆದುಕೊಳ್ಳುವ ಕ್ರೌರ್ಯ, ಅಸ್ತಿತ್ವವನ್ನು ಅಲುಗಾಡಿಸುವ ಅಸ್ತಿತ್ವದ ಪ್ರಶ್ನೆಗಳು... ಈ ಎಲ್ಲದರ ನಡುವೆ ಹೀಗೂ ಒಂದು ಕಥೆ ನಡೆಯಿತು. ಬಿರುಬಿಸಿಲಲ್ಲಿ ತಂಗಾಳಿಯ ಮುನ್ಸೂಚನೆಯಂತೆ ಹೀಗೆ ಬಂದು ತಾಕಿ ಹಾಗೆ ಹೋಯಿತು.
ಬೆಂಗಳೂರಿನ ಹೃದಯ ಭಾಗದಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಟೆಂಟುಗಳಲ್ಲಿ ವಾಸವಿರುವ ಒಂದಷ್ಟು ಕುಟುಂಬಗಳು. ಮಧ್ಯಪ್ರದೇಶದ ಆದಿವಾಸಿ ಸಮುದಾಯಕ್ಕೆ ಸೇರಿದವರು
ಬಲೂನುಗಳನ್ನು ತಂದು ಮಾರುವುದು, ಮಣ್ಣಿನ ಗೊಂಬೆಗಳನ್ನು ಅಲಂಕಾರಿಕ ವಸ್ತುಗಳನ್ನು ಮಾಡಿ ಮಾರುವುದು, ಕೇಶಾಲಂಕಾರದ ವಸ್ತಗಳನ್ನು ಮನೆಮನೆಗೆ ಒಯ್ದು ಮಾರುವುದು- ಹೀಗೆ ಏನೋ ಒಂದು ಶ್ರಮದ ದುಡಿಮೆ ಮಾಡುತ್ತಾ ಸ್ವಾಭಿಮಾನದ ಬದುಕು ಕಟ್ಟಿಕೊಂಡವರು. ಆ ಸುತ್ತಮುತ್ತಲಿನಲ್ಲಿ ಇವರು ದುಡಿದು ಬದುಕುವುದನ್ನು ನೋಡಿದ್ದೇವೆಯೆ ಹೊರತು, ಎಲ್ಲೂ ಈ ಗುಂಪಿನ ಹಿರಿಯರಾಗಲೀ ಮಕ್ಕಳಾಗಲೀ ಭಿಕ್ಷೆ ಬೇಡಿದ್ದನ್ನು ಯಾರೂ ನೋಡಿಲ್ಲ. ಕಳೆದ ಬಾರಿಯ ಲಾಕ್ ಡೌನಿನಲ್ಲೂ ಇಲ್ಲ.
ಈ ಬಾರಿ ಇನ್ನೂ ಕಡುಕಷ್ಟದ ಸಮಯ ಈ ಕುಟುಂಬಗಳಿಗೂ ಸವಾಲಾಯಿತೆನಿಸುತ್ತದೆ. ಕಳೆದ ವಾರದಲ್ಲಿ ನಿಧಾನವಾಗಿ ಅಲ್ಲಲ್ಲಿ ಇವರ ಮಕ್ಕಳು ಭಿಕ್ಷೆಗಿಳಿದಿದ್ದು ಕಾಣಿಸಿತು. ಅದು ಮನಸ್ಸಿನಲ್ಲಿ ಅಚ್ಚೊತ್ತುವುದರೊಳಗೆ ಮಕ್ಕಳು ಮರಿ ಸಮೇತ ದೊಡ್ಡವರೂ ಕೂಡಾ ರಸ್ತೆಗಳಲ್ಲಿ ಕಂಡರು. ನಿಧನವಾಗಿ ಗಂಡಸರೂ ಕೂಡಾ ಹೋಗುವ ವಾಹನಗಳನ್ನು ನಿಲ್ಲಿಸಿ ಭಿಕ್ಷೆ ಕೇಳಲಾರಂಭಿಸಿದರು. ಸವಾರರೊಬ್ಬರು ಅಂತಹ ವ್ಯಕ್ತಿಯೊಬ್ಬರೊಂದಿಗೆ ಜಗಳಕ್ಕಿಳಿದದ್ದು ಕಂಡಾಗ ಪರಿಸ್ಥಿತಿಯ ಗಂಭೀರತೆ ಮನಸ್ಸಿಗೆ ನಾಟಿತು. ಅದೇ ಸಂಜೆ ಕಿರಿಯ ಗೆಳತಿ ಕಾವ್ಯ ಸಿಕ್ಕಿ, "ಇವರುಗಳಿಗೆ ತಕ್ಷಣಕ್ಕೆ ಜನಸಹಾಯ ಕೆಸಿವಿಟಿ ಹೆಲ್ಪ್ ಲಿಂಕ್ ಕೆಲಸದ ಭಾಗವಾಗಿ ಏನಾದರೂ ಮಾಡಕ್ಕಾಗಲ್ವಾ?" ಅಂದಾಗ ನಿರ್ಧಾರ ಅಲ್ಲೇ ಮೂಡಿತು. ಅವರುಗಳಿಗೆ ಶಾಶ್ವತ ವಾಸಸ್ಥಳ ಮತ್ತು ಜೀವನ ನಿರ್ವಹಣೆಯ ವಿಷಯಕ್ಕೆ ಹೋರಾಟ ಕೋವಿಡ್ ನಂತರ ಮಾಡಬೇಕು, ಆದರೆ ಅಲ್ಲಿಯವರೆಗೆ ಅವರ ಬದುಕು ನಡೆಯಬೇಕಲ್ಲ....ಅದಕ್ಕಾಗಿ ತಕ್ಷಣವೇ ಹತ್ತಿರದ ಸ್ನೇಹಿತರೆದುರು ಮನವಿ ಮುಂದಿಟ್ಟು ಮರುದಿನ ಬೆಳಿಗ್ಗೆಯೊಳಗೆ ಬೇಕಾದ ವ್ಯವಸ್ಥೆ ಮಾಡಿಕೊಂಡು ದಿನಸಿ ಕಿಟ್‌ಗಳೊಂದಿಗೆ ಅವರ ಟೆಂಟುಗಳಿಗೆ ಹೋದೆವು.
ಚಿಕ್ಕದೊಂದು ಸಮುದಾಯದ ಜೊತೆಗಿನ ಈ ಭೇಟಿ ಶ್ರೀಮಂತ ಅನುಭವಗಳನ್ನು ನೀಡಿತು. ದಿನಸಿ ಕಿಟ್‌ಗಳನ್ನು ಪಡೆಯಲು ಕೆಲವರು ಮುಂದಾದಂತೆ ಅವರಲ್ಲೇ ಒಂದಿಬ್ಬರು ಮಹಿಳೆಯರು ಮತ್ತು ಯುವಕರು ಮನೆಗೊಬ್ಬರಂತೆ ಸಾಲಾಗಿ ಬರಬೇಕೆಂದು ಹೇಳಿ ತಮ್ಮವರನ್ನು ನಿಯಂತ್ರಿಸಿದರು. "ಮನೆಗೊಂದೇ ಕಿಟ್ ಕೊಡಿ ಮೇಡಂ, ನೀವು ಕೊಡುತ್ತೀರೆಂದು ನಾವು ಸುಳ್ಳು ಹೇಳಿ ಆಹಾರ ಪಡೆಯಬಾರದು, ನಮ್ಮ ಹಾಗೇ ಇರುವ ಇನ್ಯಾರಿಗಾದರೂ ಅದು ಉಪಯೋಗವಾಗಬಹುದು" ಎಂದರು. ಅಷ್ಟಾಗಿಯೂ ಅವರಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ಕಿಟ್ ಒಯ್ದರೆಂದು ಒಬ್ಬ ಯುವಕ ತನ್ನ ಸಣ್ಣ ಮಗನೊಂದಿಗೆ ಪ್ರತಿ ಟೆಂಟಿಗೂ ಹೋದ, ಒಂದು ಟೆಂಟಿನಿಂದ ಒಂದು ಕಿಟ್ ಹಿಡಿದುಕೊಂಡು ಹೊರಬಂದ. ಆತನ ಸಣ್ಣ ಮಗ ಅದನ್ನು ಹೊತ್ತು ತಂದು ನಮಗೆ ವಾಪಸ್ ಕೊಟ್ಟರೆ, ಈ ಯುವಕ "ಮೇಡಂ ನಮ್ಮವರು ಹಸಿವಿನ ಭಯದಲ್ಲಿ ಹೀಗೆ ಮಾಡಿದ್ದಾರೆ, ನಮಗೆ ಈ ಹೆಚ್ಚುವರಿ ಕಿಟ್ ಬೇಡ, ಅಗತ್ಯವಿರುವ ಯಾರಿಗಾದರೂ ಕೊಡಿ" ಎಂದ. "ನಾವು ಕರೆಯದೆ ನೀವು ಬಂದು ನೆರವಾಗಿದ್ದೀರಿ, ನಾವು ದುರಾಸೆ ಪಟ್ಟರೆ ಇದನ್ನೂ ಕಳೆದುಕೊಳ್ಳಬೇಕಾಗತ್ತೆ" ಎಂದು ಅವರು ಹೇಳುತ್ತಿದ್ದರೆ, ಸಾಮಾನ್ಯಜನರ ಸಾವಿನ ಚಿತೆಗೆ ಕೋಮಿನ ಬೆಂಕಿ ಹಚ್ಚಿ, ಅದರಿಂದಲೂ ಗಳ ಹಿರಿದು ಮಾರಿ ದುಡ್ಡುಮಾಡುತ್ತಿರುವ ನಮ್ಮನ್ನು ಆಳುವವರೆಲ್ಲಿ, ಹಿಡಿಯಕ್ಕಿಯನ್ನೂ ಹೆಚ್ಚಾಗಿ ಬಯಸದ ನಮ್ಮ ದೇಶದ ಹೃದಯಶ್ರೀಮಂತ ಬಡಜನರೆಲ್ಲಿ ಎಂದೆನಿಸಿ ಮಾತು ಹೊರಡಲಿಲ್ಲ.
ಇಟ್ಟುಕೊಳ್ಳಿ ಎಂದು ನಾವು ಒತ್ತಾಯಿಸಿ ಇನ್ನೂ ಕೆಲವು ಹೆಚ್ಚುವರಿ ಕಿಟ್‌ಗಳನ್ನು ಕೊಡುವ ಪ್ರಯತ್ನದಲ್ಲಿ, ಅವರ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಪ್ರಕ್ರಿಯೆಯಲ್ಲಿ ಹಾಗೇ ಮಾತುಕತೆ ನಡೆಯಿತು.
ತಾವು ಎಂಥದ್ದೇ ಸಂದರ್ಭದಲ್ಲೂ ಭಿಕ್ಷೆ ಬೇಡಿದವರಲ್ಲ, ಬಡವರಿಗೆ ಯಾವುದೇ ನೆರವಿಲ್ಲದ ಈ ಥರದ ಆಳ್ವಿಕೆ ತಾವು ಕಂಡೇ ಇಲ್ಲ ಎಂದು ಅವರಲ್ಲಿ ಹಿರಿಯರಾದ ಗಂಡಸರೊಬ್ಬರು ಹೇಳುತ್ತಿದ್ದರೆ, ಹೆಣ್ಣುಮಕ್ಕಳು ಅದಾಗಲೇ ನಮ್ಮಮಾತಿಗೆ ಕಿವಿಗೊಡುತ್ತಾ ಆಹಾರ ಸಾಮಗ್ರಿ ಚೀಲದಿಂದ ತೆಗೆದು ಅಡಿಗೆಗೆ ಸಿದ್ದತೆ ಮಾಡಲಾರಂಭಿಸಿದ್ದರು. ಹೆಣ್ಣುಮಗಳೊಬ್ಬಳು ಕೇಳಿದಳು "ಏ ಬಿಮಾರಿ ಕಬ್ ಜಾಯೇಗೀ ಮೇಡಂಜಿ' (ಈ ಖಾಯಿಲೆ ಯಾವಾಗ ಹೋಗುತ್ತದೆ). ಕೋವಿಡ್ ನ ಅಲೆಗಳನ್ನು ಹೇಗೆ ವಿವರಿಸುವುದೆಂದು ನಾನಿನ್ನೂ ಯೋಚಿಸುತ್ತಿರುವಾಗ ಆ ಹಿರಿಯ ಗಂಡಸರ ಬಳಿ ಉತ್ತರ ಸಿದ್ಧವಾಗಿತ್ತು...
"ಮೇಡಂ ಮೇರಿ ಬಾತ್ ದಿಲ್ ಪೆ ನಹೀಂ ಲೇನೆಕಾ, ಲೇಕಿನ್ ಗರೀಬೋಂಕೇಲಿಯೆ ಜೋ ಕುಛ್ ಭೀ ನಹೀ ಕರತಾ ಹೈನಾ, ವೈಸಾ ಆದ್ಮಿ ಜಬ್ ತಕ್ ಹೈ, ತಬ್ ತಕ್ ಬಿಮಾರಿ ನಹೀ ಜಾಯೇಗೀ (ನನ್ನ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಬಡವರಿಗಾಗಿ ಏನೂ ಮಾಡದ ವ್ಯಕ್ತಿ ಎಷ್ಟು ದಿನ ಇರುತ್ತಾರೋ ಅಲ್ಲಿಯವರೆಗೆ ಖಾಯಿಲೆ ಹೋಗಲ್ಲ).
ನಾನು ಆಶ್ಚರ್ಯದಿಂದ ಅವರನ್ನು ಬಿಟ್ಟಕಣ್ಣು ಬಿಟ್ಟುಕೊಂಡು ನೋಡುತ್ತಿರುವಾಗಲೇ ಹೇಳಿದರು "ಮೋದಿಜೀ ಜಬ್ ತಕ್ ಖುರ್ಸಿ ಪೇ ಹೈ, ತಬ್ ತಕ್ ಬಿಮಾರಿ ಭೀ ರಹೇಗಿ" (ಮೋದಿಜಿ ಎಲ್ಲಿಯತನಕ ಖುರ್ಚಿಯ ಮೇಲಿರುತ್ತಾರೋ ಅಲ್ಲಿಯತನಕ ಖಾಯಿಲೆ ಇರುತ್ತದೆ)!!!!
ದೇಶಕ್ಕಂಟಿದ ಖಾಯಿಲೆಯ ಕುರಿತ ಅವರದ್ದೇ ಅನುಭವದ ಮಾತಿನ ವಿಶ್ಲೇಷಣೆಯನ್ನು ಮೆಲುಕು ಹಾಕುತ್ತಾ, ಅಗತ್ಯಬಿದ್ದಾಗ ಕರೆಯಿರಿ, ಮತ್ತೆ ಬರುತ್ತೇವೆಂದು ಹೇಳಿ ಹಿಂತಿರುಗಿದೆವು. ಆ ಸ್ವಾಭಿಮಾನಿ ಬುದ್ಧಿವಂತ ಜನರ ಚಿತ್ರ ಮಾತ್ರ ಕಣ್ಣೆದುರೇ ಇದೆ!!!
ಬರಹ: ಮಲ್ಲಿಗೆ ಸಿರಿಮನೆ
ಸಂಗ್ರಹ: ನೇಮಿಚಂದ್ರ