ರಾಹುಲ್ ಗಾಂಧೀಯವರ ಭಾರತ ಜೋಡೋ ಯಾತ್ರೆ ಒಂದು ಐತಿಹಾಸಿಕ ಘಟನೆ.‌ ...??

ಎಲ್ಲವನ್ನೂ ರಾಜಕೀಯ ಮತ್ತು ಅಧಿಕಾರ ಲಾಲಸೆಯ ಮೂಸೆಯಲ್ಲಿಟ್ಟು ನೋಡುವ ಬಿಜೆಪಿಗಳಿಗೆ ಈ ಯಾತ್ರೆಯಲ್ಲಿ ಕಂಡದ್ದು ರಾಹುಲನ ಗಡ್ಡ ಮಾತ್ರ.‌ ಅದೂ ಯಾವುದೋ ಮುಸಲ್ಮಾನ ಅರಸನ ಮುಖದ ಮೂಲಕ. ಬೌದ್ಧಿಕ ದಾರಿದ್ರ್ಯದ ಪರಮಾವಧಿ ಅದು. 

 
 | 
rahul gandhi
Gladson Almeida ಅವರಿಗೆ ಕಂಡದ್ದು ಬೇರೆಯದೇ ಆದ ಒಂದು ಲೋಕ.‌ ನಾನು ಈಚೆಗೆ ಓದಿದ ಅತ್ಯುತ್ತಮ ಫೇಸ್ ಬುಕ್ ಬರಹ ಇದು. ನೀವೂ ಒಮ್ಮೆ ಓದಬಹುದು.‌ಇದು ರಾಜಕೀಯದಾಚೆಗಣ ಲೋಕದೆಡೆಗೆ ನಿಮ್ಮನ್ನು ಕೊಂಡೊಯ್ಯಬಲ್ಲುದು
 

ನಾವು ಯಾರೋ ಒಬ್ಬರು ಶಾಂತಿ ಬಯಸಿ ಬೈಸಿಕಲ್‍ನಲ್ಲಿ ನೂರು ದಿನಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಭಾರತ ಸುತ್ತಿದ್ದರ ಬಗ್ಗೆ ಹೆಮ್ಮೆ ಪಡುತ್ತೇವೆ. ಇನ್ಯಾರೋ ವಿದೇಶಿ ಪ್ರವಾಸಿಗ ಐಕ್ಯತೆ ಬಯಸಿ ವಿಶ್ವ ಪರ್ಯಟನೆ ಮಾಡಿದ್ದನ್ನು ನೋಡಿ ಹೌಹಾರುತ್ತೇವೆ. ಬೈಸಿಕಲ್‍ನಲ್ಲಿ ಅಥವಾ ಹೀಗೆ  ನಡೆಯುತ್ತಾ ಹೋಗುವವರು ದಿನವೊಂದಕ್ಕೆ ಇಂತಿಷ್ಟು ಕಿಲೋಮೀಟರ್ ನಡೆದು, ದಾರಿಯಲ್ಲಿ ಯಾರೋ ಒಬ್ಬಿಬ್ಬರು ಅವರನ್ನು ಮಾತಾನಾಡಿಸಿದರೆ, ಅವರೊಡನೆ ಮಾತಾನಾಡಿ ಮುಂದಕ್ಕೋಗುತ್ತಾರೆ. ನಮಗೆ ಅವರ ಧ್ಯೇಯ, ಉದ್ದೇಶ, ಬದ್ಧತೆ, ಸ್ಥೈರ್ಯ ಎಲ್ಲವೂ ಇಷ್ಟವಾಗಿ ನಾವವರನ್ನು ಕೊಂಡಾಡುತ್ತೇವೆ

ಆದರೆ ನಮ್ಮಲ್ಲೊಬ್ಬ ಕಳೆದ ನೂರಕ್ಕಿಂತಾ ಹೆಚ್ಚು ದಿನಗಳಿಂದ, ದಿನವೊಂದಕ್ಕೆ 20-25 ಕಿಲೋಮೀಟರ್ ನಡೆಯುತ್ತಾ, ಎರಡ್ಮೂರು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ, ತನ್ನನ್ನು ಭೇಟಿ ಮಾಡಲು ಕಾಯುತ್ತಿರುವ ನೂರಾರು ಜನರನ್ನೂ ನಿರಾಶೆಗೊಳಿಸದೇ, ಮಕ್ಕಳು, ಮಹಿಳೆಯರು, ಅಬಲರನ್ನು ಅಪ್ಪಿ, ಮುದ್ದಾಡಿ, ದಕ್ಷಿಣದ ವಿಪರೀತ್ ಸೆಖೆ-ಬಿಸಿಲು, ಉತ್ತರದ ಚಳಿ-ಮಂಜಿನಲ್ಲೂ ಮುಖದ ಮೇಲಿನ ನಗು ಒಂಚೂರೂ ಮಾಸಲು ಬಿಡದೆ ನಡೆದು ಈಗಾಗಲೇ ಮೂರು ಸಾವಿರಕ್ಕಿಂತಾ ಹೆಚ್ಚು ಕಿಲೋಮೀಟರ್ ದೂರವನ್ನು ಕ್ರಮಿಸಿದ್ದಾನೆ. ಅವನ ಮುಖದಲ್ಲಿ ದಣಿವಾಗಲಿ, ಕಣ್ಣಲ್ಲಿ 'ಇನ್ನು ಸಾಕಪ್ಪ' ಎನ್ನುವ ಭಾವನೆಯಾಗಲಿ, ದೇಹಲ್ಲಿ ಇನ್ನು ಆಗಲ್ಲ ಎನ್ನುವ ಮನೋಭಾವವಾಗಲಿ ಕಂಡುಬರುತ್ತಿಲ್ಲ. ಅವನೊಡನೆ ನಿತ್ಯವೂ ಹೆಜ್ಜೆ ಹಾಕಲು ಬಯಸುವವರು ಒಂದೆರಡು ದಿನ ನಡೆದು, ಸುಸ್ತಾಗಿ ವಾಪಾಸ್ಸಾದರೆ ಆತ ಮಾತ್ರ ಇನ್ನೂ ನಡೆಯುತ್ತಿದ್ದಾನೆ. 

ಆತನ ಹೆಜ್ಜೆ ಸ್ಪರ್ಶ ಕಂಡ ನೆಲದಲ್ಲೆಲ್ಲಾ ಪ್ರೀತಿಯ ನೆಲಮಲ್ಲಿಗೆಗಳು ಅರಳಿವೆ, ಆತನ ಅಪ್ಪುಗೆಯ ಬಿಸಿ ಪಡೆದ ಜೀವಗಳಲ್ಲಿ ಹೊಸ ಉತ್ಸಾಹ ತುಂಬಿದೆ, ಆತನ ಕೈಸ್ಪರ್ಶದಿಂದ ಹಿಂಸೆಗೆ ಮುಂದಾಗುತ್ತಿದ್ದ ಕೈಗಳು, ಪ್ರೀತಿ ಹಂಚಲಾರಂಭಿಸಿವೆ. ಆತನ ಉದ್ದೇಶವೂ ಪ್ರೀತಿ ಹಂಚುವುದು, ಶಾಂತಿ ನೆಲೆಯೂರುವಂತೆ ಮಾಡುವುದು ಹಾಗೂ ಐಕ್ಯತೆಯನ್ನು ಚಿಗುರೊಡೆಸುವುದು. 

ಅಷ್ಟಕ್ಕೂ ಅವ ಅಂತಿಂಥವನ್ನಲ್ಲ. ನಾಲ್ಕು ಬಾರಿಯ ಸಂಸದ, ನಾಡಿನ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷನಾಗಿದ್ದವ, ಯಾರಿಗೆ ಇಷ್ಟವಿದೆಯೋ, ಕಷ್ಟವಿದೆಯೋ, ಆದರೆ ಭಾರತದ ಮುಂದಿನ ಪ್ರಧಾನಿಯೆಂದು ಬಿಂಬಿತನಾದವ, ಆಗರ್ಭ ಶ್ರೀಮಂತ ಬೇರೆ, ತನ್ನ ಕುಟುಂಬದಲ್ಲೇ ಮೂರು ಪ್ರಧಾನಿ, ಮೂರ್ನಾಲ್ಕು ಸಂಸದರು ಎಂದು ಸದಾಕಾಲ ಅಧಿಕಾರದ ಸುತ್ತಮುತ್ತಲೇ ಇದ್ದವ, ತನ್ನ ತಂದೆ, ಅಜ್ಜಿಯ ಕೊಲೆ, ಚಿಕ್ಕಪ್ಪನ ದುರಂತ ಸಾವಿನ ನಡುವೆ ಬೆಳೆದವ, ತಾಯಿ-ತಂಗಿಯ ಚಾರಿತ್ರ್ಯಹರಣ, ನಿಂದನೆ, ತೆಗಳುವಿಕೆ, ಅವರ ಬಗೆಗಿನ ದ್ವೇಷ ಎಲ್ಲವನ್ನೂ ಹತ್ತಿರದಿಂದ ನಿತ್ಯವೂ ನೋಡಿದವ. ಕುಟುಂಬದಲ್ಲಿ ನಡೆದ ದುರಂತಗಳಿಂದ ಸರಿಯಾದ ಬಾಲ್ಯವನ್ನೂ ಪಡೆಯದ, ಬೆಳೆಯುವಾಗ ಅಪಾಯದಿಂದ ತಪ್ಪಿಸಿಕೊಳ್ಳಲು ತನ್ನ ಅಸ್ಮಿತೆಯನ್ನೂ ಮುಚ್ಚಿ ಬೆಳೆದವ. ಕಳೆದ ಇಪ್ಪತ್ತು ವರುಷಗಳಿಂದ ಸ್ವತ ನಿಂದನೆ, ದ್ವೇಷವನ್ನು ಎದುರಿಸಿದವ. ತನ್ನ ಪಕ್ಷದ ಸೋಲನ್ನು ಏಕಾಂಗಿಯಾಗಿ ತನ್ನ ಹೆಗಲಮೇಲೆ ಹೊತ್ತು ನಡೆದಂವ.

ಊಹುಂ! ದುರಂತ, ಕೊಲೆ, ದ್ವೇಷ, ನಿಂದನೆ, ಚಾರಿತ್ರ್ಯಹರಣ, ಸೋಲು ಯಾವುದೂ ಆತನನ್ನು ಕಂಗೆಡಿಸಿಲ್ಲ. ಬದಲಾಗಿ ಇವೆಲ್ಲವೂ ಅತನನ್ನು ದಿನಗಳೆದಂತೆ ಗಟ್ಟಿ ಮಾಡುತ್ತಲೇ ಹೋಗಿವೆ. ಈ ಪರಿ ಬಿಡಿ, ಇದರ ಹತ್ತು ಪರ್ಸೆಂಟ್ ದುರಂತ, ದ್ವೇಷ, ನಿಂದನೆ, ಚಾರಿತ್ರ್ಯಹರಣ ಕಂಡವರು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಿಡಿ, ಮನೆ ಹೊಸ್ತಿಲೂ ದಾಟಲು ಹೆದರಬಹುದು. ಆದರೆ ಈತ ಸಾವಿರಾರು ಜನರ ಮಧ್ಯೆ, ಯಾವುದೇ ಭದ್ರತೆ ಬಯಸದೇ, ಯಾವುದೇ ಹಮ್ಮು-ಬಿಮ್ಮುಗಳಿಲ್ಲದೆ ಬೆರೆಯುತ್ತಾನೆ. ಆತನ ಬಳಿ ಐವತ್ತಾರಿಂಚಿನ ಎದೆಯಿಲ್ಲ, ಆದರೆ ಅವನಿಗಿರುವ ಧೈರ್ಯ ಅಮಿತವಾದದ್ದು. ವಿಶ್ವ ಪರ್ಯಟನೆ, ಬೈಸಿಕಲ್‍ನಲ್ಲಿ ದೇಶ ಸುತ್ತುವುದು ಮುಂತಾದವುಗಳ ನಡುವೆ ಈತ ನಡೆಯುತ್ತಾ, ಪ್ರೀತಿ ಬಿತ್ತುತ್ತಾ, ನಗು ಹಂಚುತ್ತಾ, ಐಕ್ಯತೆ ಭೋಧಿಸುತ್ತಾ, ಶಾಂತಿ ಪ್ರಾರ್ಥಿಸುತ್ತಾ ಮೂರು ಸಾವಿರ ಕಿಲೋಮೀಟರ್ ನಡೆದಾಗಿದೆ. ಆತ ಸಾವಿರಾರು ಜನರನ್ನು ಜತೆಗೆ ತೆಗೆದುಕೊಂಡು ನಡೆದರೂ ಇದುವರೆಗೂ ಆತ ನಡೆದ ಯಾವುದೇ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಒಂದೇ ಒಂದು ಗಲಾಟೆಯಾಗಿಲ್ಲ, ಗಲಭೆಯಾಗಿಲ್ಲ, ಜನರ ನೂಕು-ನುಗ್ಗಲಾಗಿಲ್ಲ, ಟ್ರಾಫಿಕ್ ಜಾಮ್ ಆಗಿಲ್ಲ. ಆತನೂ ಎಲ್ಲೂ ವಿಷ ಉಗುಳಿದ್ದಿಲ್ಲ, ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದೂ ಇಲ್ಲ. 

ಆತನ ಈ ಪರ್ಯಟನೆ ನಮಗೆ, ನಮ್ಮ ದೇಶಕ್ಕೆ ದೊಡ್ಡ ವಿಷಯವೇ ಅಲ್ಲ ಎನ್ನುವಂತೆ ನಾವು ಬಾಳುತ್ತಿದ್ದೇವೆ. ಇದೊಂದು ವಿಶೇಷ ಕಾರ್ಯಕ್ರಮ ಅಲ್ಲ ಬದಲಾಗಿ ಸಾಮಾನ್ಯ ಜೀವನ ಎನ್ನುವ ಮಟ್ಟಿಗೆ ಆತನ ಪರ್ಯಟನೆ ನಮ್ಮಲ್ಲಿ ಬೆಸೆದಿದೆ. ಇಂಥದೊಂದು ಕೌತುಕ, ಇಂಥದೊಂದು ಅಸಾಮಾನ್ಯ ಸಾಧನೆಯನ್ನು ಮಾಡುವುದು ಬಿಡಿ, ಅದನ್ನು ಸರಿಗಟ್ಟಲೂ ಸಮಕಾಲೀನ ಅಥವ ಗತ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗಲಿಕ್ಕಿಲ್ಲ. That's ರಾಹುಲ್ ಗಾಂಧಿ!

ಓರ್ವ ವಿದೇಶಿ ರಾಜಕಾರಣಿ ಬಿಡುವು ಪಡೆದು ತನ್ನ ಕುಟುಂಬದೊಡನೆ ಸಮಯ ಕಳೆಯುವುದು, ತನ್ನ ಕುಟುಂಬಕ್ಕಾಗಿ ಅಡುಗೆ ಮಾಡುವುದು, ಜನರ ಮಧ್ಯೆ ಸಾಮಾನ್ಯನಂತೆ ಬೆರೆಯುವುದನ್ನು ಹೊಗಳುವ ನಾವು, ನಮ್ಮದೇ ನೆಲದ ರಾಹುಲ್ ಗಾಂಧಿ ಇದನ್ನೇ ಮಾಡಿದಾಗ ಆತನಿಗೆ ಜನರ ಬಗ್ಗೆ ಕಾಳಜಿಯಿಲ್ಲ, ಆತ ಪೂರ್ಣಾವಧಿ ರಾಜಕಾರಣಿಯಲ್ಲ, ಆತನಿಗೆ ಆತನ ತಾಯಿ ಹಾಗೂ ಕುಟುಂಬದಷ್ಟೇ ಚಿಂತೆ ಎಂದು ತೆಗಳುತ್ತೇವೆ, ಯಾಕೆಂದರೆ ಅವನಿಗಿಂತಾ ಮೊದಲು ಭಾರತೀಯ ರಾಜಕೀಯ ಇಷ್ಟೊಂದು ಸಾಮಾನ್ಯವಾಗಿ ಇರಬಲ್ಲದು, ರಾಜಕಾರಣಿಗಳೂ ಹೀಗೂ ಇರಬಹುದೆಂದು ತೋರಿಸಿಕೊಟ್ಟವರು ವಿರಳ. ಹಾಗಾಗಿಯೇ He's a square peg in a round hole! ಆತ ರಾಜಕಾರಣಿಯಾಗಿ ಬಹುಶ ಭಾರತದ ಸಮಕಾಲೀನ ರಾಜಕೀಯದಲ್ಲಿ ಸಲ್ಲಲಿಕ್ಕಿಲ್ಲ. ಆದರೆ ಓರ್ವ ಮನುಷ್ಯನಾಗಿ ಆತನ ಸಮನಾಗಿ ನಿಲ್ಲಲು ಭಾರತದ ಪ್ರಸಕ್ತ ರಾಜಕಾರಣಿಗಳಲ್ಲಿ ಯಾರೂ ಸಲ್ಲಲಿಕ್ಕಿಲ್ಲ ಎನ್ನುವುದೂ ಅಷ್ಟೇ ದೊಡ್ಡ ಸತ್ಯ