ಶೋಷಿತರ ಬಗ್ಗೆ ಸಿದ್ದರಾಮಯ್ಯ ವಿಶ್ವಾಸಾರ್ಹತೆ ಮತ್ತು ನಟ ಚೇತನ್‌ ಅಹಿಂಸಾ ಎತ್ತಿದ ಪ್ರಶ್ನೆಗಳು
 

ಸಿದ್ದರಾಮಯ್ಯ ಅವರಿಗೆ ಅಹಿಂದ ಎಂಬುದು ಚುನಾವಣಾ ಕಾಲದಲ್ಲಿ ಅಧಿಕಾರ ಗಳಿಸುವ ಒಂದು ವೆಪನ್ ಆಗಿದೆಯೇ ಹೊರತು, ಅಹಿಂದ ವರ್ಗಗಳ ಶಾಶ್ವತ ಧ್ವನಿಯಾಗಿಲ್ಲ, ಅವರ ಬಿಡುಗಡೆ ಶಕ್ತಿಯಾಗಿಲ್ಲ ಯಾಕೆ? ಜನಪರ ನಾಯಕನೋರ್ವ ಜನರ ಬಿಡುಗಡೆಗಾಗಿ ಒಂದು ಸಾರ್ವಕಾಲಿಕ ಪರ್ಯಾಯ ಮಾರ್ಗವೊಂದನ್ನು ರೂಪಿಸುತ್ತಾನೆ. ಅವರ ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಒಳಗು ಹೊರಗೂ ಕೆಲಸ ಮಾಡುತ್ತಾನೆ. ಹಾಗೆ ನೋಡಿದರೆ ಸಿದ್ದರಾಮಯ್ಯ ಎಸ್‌ಸಿಪಿ, ಟಿಎಸ್‌ಪಿ, ಸಾಲ ಮನ್ನಾ, ವಿದ್ಯಾರ್ಥಿ ವೇತನ, ಅನ್ನಭಾಗ್ಯ ಇತ್ಯಾದಿಗಳನ್ನು ಜಾರಿಗೆ ತಂದರು. ಆದರೆ ಇವು ರಾಜಕೀಯ ಪಕ್ಷಗಳ ಜನಪ್ರಿಯ ಅಮಿಷಗಳ ವಲಯದಲ್ಲೇ ಇವೆ. 
 | 
chetan

ಇತ್ತೀಚೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಊದ್ದೇಶಿಸಿ ಮಾಡಿದ ಟ್ವೀಟ್‌ಸಾಮಾಜಿಕ ಜಾಲತಾಣಗಳು ಸೇರಿದಂತೆ ಎ ಲ್ಲಡೆ ಭಾರಿ ಪ್ರಮಾಣದಲ್ಲಿ ಪರ - ವಿರೋಧದ ನೆಲೆಯಲ್ಲಿ ಚರ್ಚೆಯಾಗುತ್ತಿದೆ. ಪ್ರಶ್ನೆಯ ಸಂಬಂಧವಾಗಿ ಕಾಂಗ್ರೆಸ್‌ಮತ್ತು ಸಿದ್ದರಾಮಯ್ಯ ಬೆಂಬಲಿಗರು, ಚೇತನ್‌ಅವರ ಪ್ರಶ್ನೆ ಬಿಜೆಪಿಯನ್ನು ಸಂತುಷ್ಟಗೊಳಿಸುವಂತಿವೆ ಎಂದು ಆಕ್ಷೇಪಿಸಿದರೆ ಅಂಬೇಡ್ಕರ್‌ವಾದಿಗಳು ಅವರ ಪ್ರಶ್ನೆಯಲ್ಲಿ ನಿಜವಾದ ಕಾಳಜಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಷ್ಟಕ್ಕೂ ಚೇತನ್‌ಅವರ ಹೇಳಿಕೆಯಲ್ಲಿರುವ ವಿಷಯ ಏನೆಂದು ನೋಡೋಣ. " ಕರ್ನಾಟಕದ ಪ್ರಬಲ ಮತ್ತು ವಾದನೀಯವಾಗಿ ಕಾಂಗ್ರೆಸ್‌ನ ಅತ್ಯುತ್ತಮ ನಾಯಕರಾದ ಸಿದ್ದರಾಮಯ್ಯನವರು ಮೂಲಭೂತವಾಗಿ ಬೃಾಹ್ಮಣ್ಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಜಾತಿ ನಾಯಕರು. ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ಜಾತಿ ವಿರೋಧಿ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ಹುಟ್ಟಿದ ಜಾತಿಗೆ ಮಾತ್ರ ಸೀಮಿತವಾಗಿದೆ. ಇತರೆ ಬಹುಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತನಾಡುತ್ತಾರೆ” ಎಂದು ಟ್ವೀಟ್‌ಮಾಡಿದ್ದರು.
ಚೇತನ್‌ಅವರ ಪ್ರತಿಕ್ರಿಯೆ ಪ್ರಚೋದಿತ ಮಾದರಿಯಲ್ಲಿದ್ದರೂ ಅದು ಹಲವು ಹಲವು ಸೂಕ್ಷ್ಮ ಪ್ರಶ್ನೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಉರುಳೇ ಇಲ್ಲ ಎಂಬುದು ಪಲಾಯನವಾದವಾಗುತ್ತದೆ. ಸಿದ್ದರಾಮಯ್ಯ ಒಬ್ಬ ಕಂಪ್ಲೀಟ್ ಕ್ಲೀನ್ ರಾಜಕಾರಣಿ ಎಂಬಂತೆಯೂ, ಪ್ರಶ್ನಾತೀತ ನಾಯಕ ಎಂಬಂತೆಯೂ, ಮೋದಿ ಎದುರು ಸಿದ್ದರಾಮಯ್ಯರನ್ನು ಪ್ರಶ್ನೆಗೆ ಒಡ್ಡಲು ಇದು ಕಾಲವಲ್ಲ ಎಂಬಂತೆಯೂ ತಕರಾರು ತೆಗೆಯುತ್ತಿರುವವರು ಚೇತನ್‌ಅವರು ಕೇಳುತ್ತಿರುವ ಪ್ರಶ್ನೆಯಲ್ಲಿನ ಪ್ರಾಮಾಣಿಕ ಸಂಗತಿಗಳನ್ನು ನಿರ್ಲಕ್ಷಿಸಿದ್ದಾರೆ. ಅಥವಾ ಈ ಕಾಲಕ್ಕೆ ವಿಪಕ್ಷಗಳಿಗೆ ಇರಬೇಕಾಗಿದ್ದ ಎಚ್ಚರಿಕೆಯ ಜನಪರ ನೋವಿನ ಧ್ವನಿಯೊಂದನ್ನು ಗ್ರಹಿಸುವಲ್ಲಿ ಸೋಲುತ್ತಿವೆ ಎನ್ನಬೇಕಾಗುತ್ತದೆ. 

ಭ್ರಷ್ಟಾಚಾರ, ಅಸಮಾನತೆ, ಸ್ವಜನ ಪಕ್ಷಪಾತ, ಜಾತಿ, ಧರ್ಮ, ಕೋಮು ರಾಜಕಾರಣ ಇತ್ಯಾದಿಗಳನ್ನು ಸೋಲಿಸಲು ಜನರಿಗೆ ಸರಳವಾಗಿ ಅರ್ಥ ಮಾಡಿಸಬಲ್ಲ, ಸರ್ವ ಸಾಮನ್ಯರನ್ನೂ ಒಳಗೊಳ್ಳುವ ಸ್ಟೋರಿಯೊಂದರ ಅಗತ್ಯ ಈಗ ವಿಪಕ್ಷಗಳಿಗೆ ತುರ್ತಾಗಿ ಇದೆ. ಸೈದ್ಧಾಂತಿಕವಾದ ಸಮರ್ಥ ಸಲಕರಣೆಗಳಿಲ್ಲದೆ ವಿರೋಧಿಗಳನ್ನು ಎದುರಿದುವುದು ಹೇಗೆ? ಚೇತನ್ ಹೇಳುತ್ತಿರುವುದೂ ಇದನ್ನೇ. ಸ್ವಾತಂತ್ರೋತ್ತರ ಕಾಲವಿರಲಿ, ಮೋದಿಯೋತ್ತರ ಈ ಏಳೂವರೆ ವರ್ಷಗಳಲ್ಲೂ ದೇಶದ ಯಾವುದೆ ವಿಪಕ್ಷಗಳಿಗೂ ಹಿಂದುತ್ವ ಮತ್ತು ಕೋಮು ರಾಜಕಾರಣದ ವಿರುದ್ಧ ಒಂದು ಗಟ್ಡಿಯಾದ ಸ್ಸ್ಟೋರಿಯನ್ನು ಸಿದ್ದಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ಈ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ  ಮತ್ತೆ ಹಿಂದುತ್ವದ ಸಲಕರಣೆಗಳನ್ನೇ ಅವಲಂಬಿಸಿರುವೆ ಅಥವಾ ಇವುಗಳ ಬೇರು ಇರುವುದು ಮತ್ತೆ ಅದೇ ಹಿಂದುತ್ವದ ಪಾಲನೆಯಲ್ಲೇ. ಇಂದು ಕೋಮುವಾದಿ ಶಕ್ತಿಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದ ಜನರ ಪರವಾಗಿ ಈ ಪಕ್ಷಗಳು ಯಾವ ಗಟ್ಟಿಯಾದ ಹೋರಾಟ, ಪ್ರಶ್ನೆ, ಚಳವಳಿಯನ್ನು ರೂಪಿಸಿವೆ ಎಂದು ನೋಡಿದರೆ ಶೂನ್ಯವೇ ಕಾಣುತ್ತದೆ. ಇದು ದುರದೃಷ್ಟಕರ ಮತ್ತು ನಿರಾಶದಾಯಕ ಸಂಗತಿ.

ಒಂದು ವೇಳೆ ರಾಜಕೀಯವಾಗಿ ವಂಚಿತ ಸಮುದಾಯವಾದ ಎಡಗೈ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ, ಈ ಸಮುದಾಯಗಳಿಗೆ ಸಾಂವಿಧಾನಿಕ ಅವಕಾಶ ಕಲ್ಪಿಸುವ ಅಹಿಂದ ಹೋರಾಟಕ್ಕೆ ಸಾಂಘಿಕ ಮತ್ತು ಸಾಂಸ್ಥಿಕ ರೂಪವನ್ನು ನೀಡಿದ್ದರೆ. ಆರೆಸೆಸ್‌ ಮತ್ತು ಬಿಜೆಪಿಯಂತ ರಾಜಕೀಯ ಅಜೆಂಡಾಗಳ ಎದುರು ಹೋರಾಡಿ ಈ ಸಮುದಾಯಗಳಿಗೆ ನ್ಯಾಯ ಒದಗಿಸುವ ಶಕ್ತಿ ಮತ್ತು ಯುಕ್ತಿ ನೀಡಿದ್ದರೆ ಸಿದ್ದರಾಮಯ್ಯ ಅವರನ್ನು ಜನನಾಯಕ ಎಂದು ಪರಿಗಣಿಸಬಹುದಿಲ್ಲ. ಆದರೆ ಜನನಾಯಕ, ಜನಪ್ರಿಯ ನಾಯಕ, ಅಹಿಂದ ನಾಯಕ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯ ಅವರಿಗೆ ಇದು ಯಾಕೆ ಅನ್ವಯಿಸುವುದಿಲ್ಲ ಎಂಬುದು ಚೇತನ್‌ ಅವರ ಪ್ರಶ್ನೆಯೂ ಇರಬಹುದು.   ಕೇವಲ ಬಿಡಿಬಿಡಿಯಾದ, ತಮಾಶೆ ಭರಿತ ಅವರ ಪ್ರಶ್ನೆಗಳು ಹಿಂದುತ್ವದ ಶಕ್ತಿಗಳು ಸೃಷ್ಟಿಸಿರುವ ಸರಪಳಿಯನ್ನು ಕತ್ತರಿಸುವಷ್ಟು ಶಕ್ತಿಯುತವಾಗಿಲ್ಲ. ಸಿದ್ದರಾಮಯ್ಯ ಅವರ ಸಟೈರ್ ಆದ ಪ್ರಶ್ನೆಗಳು ಕೋಮು ಶಕ್ತಿಗಳನ್ನು ಸೋಲಿಸಲು ಶಕ್ತವಾಗಿಲ್ಲ ಎಂಬುದನ್ನು ಈಗಾಗಲೇ ಕಂಡಿದ್ದೇವೆ. 

ಚೇತನ್ ಒಬ್ಬ ಸ್ನಾತಕೋತ್ತರ ಪದವೀಧರಾಗಿದ್ದು ಬಹುಷಃ ಪ್ರಜ್ಞಾಪೂರ್ವಕವಾಗೇ ಹೀಗೆ ಪ್ರಶ್ನೆ ಮಾಡಿರಬಹುದು. ಸಿದ್ದರಾಮಯ್ಯ ವಿರುದ್ಧ ಪ್ರಶ್ನೆ ಯಾಕೆ. ಇದೇ ಪ್ರಶ್ನೆಯನ್ನ ಚೇತನ್ ಯಡಿಯೂರಪ್ಪ, ಹೆಚ‌ಡಿಕೆ, ಬಿಜೆಪಿ, ಮೋದಿ, ಡಿಕೆಶಿ ಮತ್ತಿತರರ ಬಗ್ಗೆ ಕೇಳಿಲ್ಲ ಯಾಕೆ ಎಂದು ಕೆಲವರು ಕೇಳುತ್ತಿದ್ದಾರೆ.  ಸೈದ್ದಾಂತಿಕವಾಗಿ ಜನ  ವಿರೋಧಿ ನೀತಿ ನಿಲುವು ಮತ್ತು ಅಜೆಂಡಾ ಹೊಂದಿದವರ ವಿರುದ್ಧ ಚೇತನ್‌ಗೆ ಸೈದ್ಧಾಂತಿಕ ವಿರೋಧ ಇದ್ದೇ ಇದೆ. 

ಆದರೆ ಪ್ರಶ್ನೆ, ಜಗಳ, ಚರ್ಚೆ ಇರೋದು ಸೈದ್ಧಾಂತಿಕ ಸಮಾನ ನಿಲುವು ಹೊಂದಿಯೂ ಗೊಂದಲದ ನಿಲುವು, ಅಸ್ಪಷ್ಟ ನೀತಿ, ನಿರ್ಧಾರ ಹೊಂದಿದ ಪಕ್ಷ, ನಾಯಕರು, ಸರ್ಕಾರಗಳ ವಿರುದ್ಧ. ಸಿದ್ಧರಾಮಯ್ಯ ಅವರಿಗೆ ಚೇತನ್ ಕೇಳಿರುವ ಪ್ರಶ್ನೆಗಳೂ ಇದೇ ನೆಲೆಯಲ್ಲಿ ಇವೆ. ಅವರ ಪ್ರಶ್ನೆಗಳು ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ಮಿತಿಗಳನ್ನು ಪರಿಹರಿಸಿಕೊಳ್ಳಲು ಒಂದು ಸಕಾಲವಾಗಿತ್ತು ಮತ್ತು ಅವಕಾಶವಾಗಿತ್ತು. ಆದರೆ ಕೇಳಿಸಿಕೊಳ್ಳಲು ಸಿದ್ದವೇ ಇರದ ಇವರಿಗೆ ಬಿಜೆಪಿಯನ್ನು ಸೋಲಿಸುವುದು ಇರಲಿ, ಸ್ಪರ್ಧಾತ್ಮಕ ರಾಜಕೀಯ ಶಕ್ತಿಯಾಗಿ ಉಳಿಯುವ ಕಾಂಗ್ರೆಸ್‌ಪಕ್ಷದ ಫೇರ್‌ನೆಸ್ ಮತ್ತು ಫಿಟ್‌ನೆಸ್ ಬಗ್ಗೆ ವಿಶ್ವಾಸ ಉಳಿಯಲು ಹೇಗೆ ಸಾಧ್ಯ. 
ಕೋಮುವಾದಿ ಗೂಂಡಾ ರಾಜಕಾರಣದ ಎದುರು ಗೂಂಡಾ ಅಥವಾ ಗಾಂಧಿ, ಅಂಬೇಡ್ಕರ್ ರಾಜಕಾರಣ ಮಾತ್ರ ಗೆಲ್ಲಬಹುದು. ಆದರೆ ಗಾಂಧಿಯನ್ನು ಐಕಾನ್ ಆಗಿ ಹೊಂದಿರುವ ಈ ಪಕ್ಷಕ್ಕೆ ಇಂದು ಗೂಂಡಾಗಿರಿ ಮಾದರಿಯಾದಂತೆ ಕಾಣುತ್ತಿರುವುದು ವಿಚಿತ್ರ ಸತ್ಯವಾಗಿದೆ. 

ಮೂಢನಂಬಿಕೆ ನಿಷೇಧದ ಕಾಯ್ದೆ ಕರಡು ಸಿದ್ದವಾದ ಮೇಲೆ ಸಚಿವ ಸಂಪುಟ ಉಪಸಮಿತಿಗೆ ಒಪ್ಪಿಸಿ ಕೈತೊಳೆದುಕೊಂಡ ಸಿದ್ದರಾಮಯ್ಯ, ( ವಿಚಿತ್ರ ಗೊತ್ತೆ ಈ ಕಾಯ್ದೆಯನ್ನು ಅಧಿಕಾರಕ್ಕೆ ಬಂದ ಬಿಜೆಪಿ ಜಾರಿಗೆ ತಂತು,😀😀😀) ಲೊಕಾಯುಕ್ತದ ದೆಸೆಯಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅದನ್ನ ಮೂಲೆಗೆ ತಳ್ಳಿದರು. ಯಾಕೆ..? ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿದ್ದ ಎರಡು ವರದಿಗಳಲ್ಲಿ ಮೊದಲ ವರದಿಯನ್ನು ಯಾಕೆ ಜಾರಿಗೊಳಿಸಲಿಲ್ಲ? ಯಾಕೆಂದರೆ ಮೊದಲ ವರದಿಯಲ್ಲಿ ಲಾಡ್ ಸಹೋದರರು, ಧರ್ಮಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರಿದ್ದರು. ಅಹಿಂದ ವರ್ಗಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಿಜವಾದ ಕಾಳಜಿ ಇದ್ದರೆ ಅವರು ಕನಿಷ್ಠ ಶೋಷಿತ ವರ್ಗಗಳಿಗೆ ತಮ್ಮ ಎರಡನೇ ಅವಧಿಯಲ್ಲಾದರೂ ಅಧಿಕಾರ ಬಿಟ್ಟುಕೊಡುವ ಮನಸ್ಸು ಮಾಡಬೇಕಿತ್ತು. ಆದರೆ ಅವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದರೂ ಕನಿಷ್ಠ ಈ ವರ್ಗದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಮನಸ್ಸು ಮಾಡಲಿಲ್ಲ. ಬದಲು ಅಧಿಕಾರದಿಂದ ಅವರನ್ನು ದೂರವೇ ಇಟ್ಟರು. ಇಷ್ಟೇ ಆಗಿದ್ದರೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಲು ತಕ್ಕ ಸಮಯವಾಗುತ್ತಿರಲಿಲ್ಲವೇನೊ. ಆದರೆ ೨೦೧೮ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗಲೂ ಸಿದ್ದರಾಮಯ್ಯ ಅವರು ಎರಡನೇ ಬಾರಿಗೂ ತಾವೇ ಮುಖ್ಯಮಂತ್ರಿಯಾಗುವ ಕನಸು ಕಂಡರು. ಇದೇ ಪಕ್ಷದಲ್ಲಿ ತಮಗಿಂತ ಹೆಚ್ಚು ಬಾರಿ ಗೆದ್ದ ಬಂದ ಶೋಷಿತ ಸಮುದಾಯ ನಾಯಕರು ಆಗಲೂ ಕಾಣದೆ ಇದ್ದದ್ದು ಸಿದ್ದರಾಮಯ್ಯ ಅವರಿಗೆ ಅಹಿಂದ ವರ್ಗಗಳ ಬಗೆಗೆ ಇರುವ ಕಾಳಜಿಯನ್ನು ಪ್ರಶ್ನೆ ಮಾಡಬೇಕಾಗುತ್ತದೆ.

ಜೆಡಿಎಸ್‌- ಕಾಂಗ್ರೆಸ್‌ಸಮ್ಮಿಶ್ರ ಸರ್ಕಾರದ ಪತನದಲ್ಲಿ ಹಲವು ಅನುಮಾನಗಳಿಗೆ. ಬಿಜೆಪಿಯ ಆಪರೇಶನ್‌ಕಮಲಕ್ಕೆ ಒಳಗಾದ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಪರಮಾಪ್ತರು. ಈ ಶಾಸಕರಿಗೆ ೨೦೧೮ ಚುನಾವಣೆಯಲ್ಲಿ ಟಿಕೆಟ್‌ಸಿಗುವಲ್ಲಿ ಸಿದ್ದರಾಮಯ್ಯ ಅವರ ಪಾತ್ರ ದೊಡ್ದದಾಗಿತ್ತು. ಆದರೂ ಇದೇ ಶಾಸಕರು ಬಿಜೆಪಿ ಸೇರಲು ಕಾರಣವೇನು. ದೇವೇಗೌಡರ ಮೇಲಿನ ಸಿಟ್ಟಿನಿಂದ ತಮ್ಮ ಆಪ್ತ ಶಾಸಕರು ಬಿಜೆಪಿಗೆ ತೆರಳುವಂತೆ ಮಾಡಿ ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸುವಲ್ಲಿ ಸಿದ್ದರಾಮಯ್ಯ ಸಮುದಾಯದ ಇಬ್ಬರು ಶಾಸಕರೂ ಸೇರಿದಂದ ಅವರ ಬೆಂಬಲಿಗರ ಪಾತ್ರವಿದೆ ಎಂಬ ಮಾತುಗಳು ಈಗಲೂ ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.  

 ತಮಿಳುನಾಡಿನಲ್ಲಿ ಸ್ಟಾಲಿನ್ ಅವರು ತೆಗೆದುಕೊಳ್ತಿರುವ ಪ್ರಗತಿಪರ ನಿರ್ಧಾರಗಳನ್ನು ನೋಡಿ. ಐದು ವರ್ಷ ಬಹುಮತದ ಸರ್ಕಾರ ಇದ್ದೂ ಇಂಥ ಒಂದು ಸೈದ್ಧಾಂತಿ ಗಟ್ಟಿತನದ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ ಎಂದರೆ ಅವರ ಬೆಂಬಲಿಗರು ಮತ್ತದೇ ಕಾಂಗ್ರೆಸ್ ಕೂಡ ಒಂದು ರಾಜಕೀಯ ಪಕ್ಷ ಎನ್ನುತ್ತಾರೆ. ಹೀಗೆ ಒಂದೊಂದನ್ನೇ ರಾಜಿ ಮಾಡಿಕೊಂಡು ಹೊರಟಿರೋದರಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡವೆ ಇಂದು ವ್ಯತ್ಯಾಸ ಉಳಿದಿಲ್ಲ.

ಚೇತನ್ ಎತ್ತಿದ ಪ್ರಶ್ನೆಗಳ ಚರ್ಚೆ ವೇಳೆ ಹಲವರು ಅವರ ನುಡಿಗಟ್ಟು, ಭಾಷೆ, ತಿಳುವಳಿಕೆ, ಜಾತಿಯ ಕುರಿತು ( ಚರ್ಚಿಸಿದ್ದರೆ ಓಕೆ ಎನ್ನಬಹುದಿತ್ತು) ಅಪಹಾಸ್ಯ ಮಾಡುತ್ತಿರುವುದು ಜಾತ್ಯತೀತ ಸಿದ್ದರಾಮಯ್ಯರ ಟೊಳ್ಳುಗಳಂತೆ ಅವರ ಬೆಂಬಲಿಗರ ನಕಲಿ ಜಾತ್ಯತೀತತೆಯನ್ನೂ ಬೆತ್ತಲು ಮಾಡುತ್ತಿದೆ.

 ಚೇತನ್ ಅವರ ಕನ್ನಡ ಮಾತು, ಚರಿತ್ರೆ, ಭಾಷಾ ಜ್ಞಾನ ಕಡಿಮೆ ಇರಬಹುದು, ಭಾಷಾ ಬಳಕೆ, ನುಡಿಗಟ್ಟು  ತಪ್ಪಾಗಿರಬಹುದು. ಆದರೆ ಅವರ ಭಾವ ಕುರುಡಾಗಿಲ್ಲ, ಸಮಾನತೆಯ ಆಶಯ ಕುಂಟಾಗಿಲ್ಲ ದೃಷ್ಟಿಕೋನ ಕಿವುಡಾಗಿಲ್ಲ ಎಂಬುದನ್ನ ಸಿದ್ದರಾಮಯ್ಯ ಮತ್ತು ಬೆಂಬಲಿಗರು ಅರಿಯಬೇಕಾದ ಅಗತ್ಯವಿದೆ.