ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ

ಬ್ಲಾಕ್ ಫಂಗಸ್ ಸಮಿತಿಯಿಂದ ಪ್ರಾಥಾಮಿಕ ಮಾಹಿತಿ: ಸಚಿವ ಸುಧಾಕರ್

 | 
D. K sudhakar

ಬೆಂಗಳೂರು: ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಸರ್ಕಾರ ನೇಮಕ ಮಾಡಿರುವ ಬ್ಲಾಕ್ ಫಂಗಸ್ ಸಮಿತಿ ನೀಡಿದ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ಲಾಕ್ ಫಂಗಸ್ ಸೋಂಕಿನ ಮೂಲ ಪತ್ತೆ ಮಾಡಲು ಸಮಿತಿ ರಚಿಸಲಾಗಿದ್ದು, ಅತಿಯಾದ ಸ್ಟಿರಾಯ್ಡ್ ಬಳಕೆ ಹ್ಯುಮಿಡಿಫೈರ್ ನಲ್ಲಿ ನೀರು ಬಳಕೆ, ಒಬ್ಬರು ಬಳಸಿದ ಐಸಿಯು ವೆಂಟಿಲೇಟರ್ ಗಳನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ಅನ್ನು ದೀರ್ಘಕಾಲ ಬಳಕೆ ಮಾಡಿದರೆ, ನೈರ್ಮಲ್ಯವಿಲ್ಲದ ಟ್ಯೂಬ್, ಹಾಸಿಗೆಗಳ ಬಳಕೆಯಿಂದ ಸೋಂಕು ಬರುತ್ತದೆ ಎಂದು ವರದಿ ಹೇಳಿದೆ ಹಾಗೆ ಇದನ್ನು ತಡಗಟ್ಟುವ ವಿಧಾನವನ್ನೂ ಸಹ ವರದಿಯಲ್ಲಿ ತಿಳಿಸಲಾಗಿದೆ ಎಂದರು.

ಕೋವಿಡ್ ಆಸ್ಪತ್ರೆಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ನಡೆಸಬಾರದು, ಹೊರಗಿನವರು ವಾರ್ಡ್‍ಗೆ ಬರಬಾರದು, ಪ್ರತಿ ಪಾಳಿ ಮುಗಿದ ಮೇಲೆ ಸ್ವಚ್ಛತೆ ಮಾಡಬೇಕು, ಪ್ರತಿ ಉಪಕರಣಗಳನ್ನು ಸ್ವಚ್ಛವಾಗಿಡಬೇಕು ಹಾಗೂ ಕೋವಿಡ್ ನಿಂದ ಗುಣಮುಖರಾದವರಿಗೆ ಇಎನ್ ಟಿ ವೈದ್ಯರು 3, 7, 21ನೇ ದಿನ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದೆಲ್ಲೆಡೆ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆಂದು ತಿಳಿದುಬಂದಿದೆ. ಎಲ್ಲ ಜಿಲ್ಲಾಸ್ಪತ್ರೆಗಳು ಸೇರಿದಂತೆ 17 ಮೆಡಿಕಲ್ ಕಾಲೇಜುಗಳಲ್ಲಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ, ಸ್ವಲ್ಪ ಮಟ್ಟಿಗೆ ಔಷಧಿಗಳ ಕೊರತೆ ಇದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಲಾಗಿದೆ ಕೇಂದ್ರದಿಂದ ಹೆಚ್ಚು ಔಷಧಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.