ಅಸಮರ್ಪಕ ಬೆಡ್ ವ್ಯವಸ್ಥೆ, ಚಿಕಿತ್ಸೆ ವಿಳಂಬದಿಂದ 600 ಸಾವು

ಒಂದು ತಿಂಗಳಲ್ಲಿ 600 ಕೊರೋನಾ ರೋಗಿಗಳು ಮನೆಯಲ್ಲಿಯೇ ಸಾವು

 | 
ಅಸಮರ್ಪಕ ಬೆಡ್ ವ್ಯವಸ್ಥೆ, ಚಿಕಿತ್ಸೆ ವಿಳಂಬದಿಂದ 600 ಸಾವು

ಬೆಂಗಳೂರು: ರಾಜ್ಯದಲ್ಲಿ ಸಮಯಕ್ಕೆ ಸರಿಯಾಗಿ ಬೆಡ್ ಸಿಗದೆ ಮತ್ತು ವಿಳಂಬ ಚಿಕಿತ್ಸೆಯಿಂದಾಗಿ ಕಳೆದ 1 ತಿಂಗಳಿಂದ ಸುಮಾರು 600 ರೋಗಿಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಏಪ್ರಿಲ್ 13 ರಿಂದ 30 ರವರೆಗೆ ಸುಮಾರು 120 ಇದ್ದ ಸಾವಿನ ಸಂಖ್ಯೆ ಮೇ 1 ರಿಂದ ಮೇ 13ರವರೆಗೆ ಇದ್ದಕ್ಕಿದ್ದಂತೆ 479ಕ್ಕೇರಿದೆ, ಮೇ 12 ರಂದು ಅತಿ ಹೆಚ್ಚು ಸಾವುಗಳು ದಾಖಲಾಗಿದ್ದು, ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ 88 ಮಂದಿ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಹುಡುಕಾಟ, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ಸರಿಯಾಗಿ ಬೆಡ್ ವ್ಯವಸ್ಥೆ ಆಕ್ಸಿಜನ್, ಹಾಗೂ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಈ ಸಾವುಗಳು ಸಂಭವಿಸಿವೆ ಎಂದು ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ನಂದಕುಮಾರ್ ತಿಳಿಸಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ, ಇದಕ್ಕನುಗುಣವಾಗಿ ಬೆಡ್ ವ್ಯವಸ್ಥೆ ಇಲ್ಲ ಕೆಲ ರೋಗಿಗಳಿಗೆ 2-3 ದಿನಗಳವರೆಗೆ ಐಸಿಯು ವ್ಯವಸ್ಥೆ ಸಿಗುತ್ತಿಲ್ಲ, ಈ ಮೊದಲು ಮನೆ ಆರೈಕೆ ಸೇವೆಗಾಗಿ ವೈದ್ಯರನ್ನು ರೋಗಿಗಳ ಮನೆಗೆ ಕಳುಹಿಸಲಾಗುತ್ತಿತ್ತು, ಆದರೆ ಈಗ ಅದು ಲಭ್ಯವಿಲ್ಲ ಎಂದು ತುರ್ತು ಸೇವೆ ವಿಭಾಗದ ಸ್ವಯಂ ಸೇವಕ ಅಮೀನ್ ಇ ಮುದಾಸಿರ್ ಹೇಳಿದ್ದಾರೆ.

ರೋಗದ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸದಿರುವುದು, ರೋಗಿಗಳ ಸಂಬಂಧಿಕರ ನಿರ್ಲಕ್ಷ್ಯ ವರ್ತನೆಯಿಂದ ಚಿಕಿತ್ಸೆ ವಿಳಂಬ ಹಾಗೂ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿದ ಹಿನ್ನೆಲೆ ಸಾವಿನ ಸಂಖ್ಯೆಯೂ ಹೆಚ್ಚಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ. ಎಸ್ ಸಚ್ಚಿದಾನಂದ್ ತಿಳಿಸಿದ್ದಾರೆ.

ಈ ಮೊದಲು ನನಗೆ ಪ್ರತಿದಿನ 5-10 ಕರೆ ಬೆಡ್ ಕೇಳಿ ಬರುತ್ತಿದ್ದವು, ಆದರೆ ಈಗ ಅದರ ಸಂಖ್ಯೆ ಇಳಿದಿದ್ದು, ಕೇವಲ 1 ಮತ್ತು 2 ಕರೆಗಳು ಬರುತ್ತಿವೆ. ಕೇಂದ್ರ ಬೆಡ್ ನಿರ್ವಹಣೆ ವ್ಯವಸ್ಥೆಯಿಂದ ಇಳಿಮುಖವಾಗಿದೆ ಎಂದು ಸಚ್ಚಿದಾನಂದ್ ಹೇಳಿದ್ದಾರೆ.