ಕೊರೋನಾ ತಡೆಯಲು “ಕೊರೋನಾ ದೇವಿ”ಗೆ ವಿಶೇಷ ಪೂಜೆ!!

ಕೊಯಮ್ಮತ್ತೂರಿನಲ್ಲಿ ಕೊರೋನಾ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ

 | 
worshipping Corona devi

ಕೊಯಮ್ಮತ್ತೂರು: ಕೋವಿಡ್ ಮಹಾಮಾರಿ ಎರಡನೇ ಅಲೆಯ ಹಾವಳಿ ದೇಶದೆಲ್ಲೆಡೆ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲಿ ತಮಿಳನಾಡು ರಾಜ್ಯದ ಕೊಯಮ್ಮತೂರಿನ ಕಮಚಿಪುರಂ ಅದಿನಂ ಪದಾಧಿಕಾರಿಗಳು ‘ಕೊರೋನಾ ದೇವಿ’ಯ ಮೂರ್ತಿಯನ್ನ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ಕಮಾಚಿಪುರಂ ಗ್ರಾಮದ ಹೊರವಲಯದಲ್ಲಿ 1.5 ಉದ್ದದ ಕಪ್ಪುಕಲ್ಲಿನಲ್ಲಿ ಕೊರೋನಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತಿದೆ. ಕೊರೋನಾ ದೇವಿ ಈ ಭಯಾನಕ ಖಾಯಿಲೆಯಿಂದ ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ ಎಂದು ದೇವಸ್ಥಾನದ ಪೂಜಾರಿ ತಿಳಿಸಿದ್ದಾರೆ.

ಕೊರೋನಾದಿಂದ ಮುಕ್ತಿಗೊಳಿಸಲೆಂದು ದೇವಸ್ಥಾನದ ಪದಾಧಿಕಾರಿಗಳು ಕೊರೋನಾ ದೇವಿಗೆ 48 ದಿನಗಳ ಕಾಲ ವಿಶೇಷ ಪೂಜೆಯನ್ನು ನೆರವೇರಿಸಲು ತೀರ್ಮಾನಿಸಿದ್ದು, ಲಾಕ್ ಡೌನ್ ನಿಯಮಗಳು ಜಾರಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಈ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಕಮಾಚಿಪುರಿ ಆದಿನಂ ಮ್ಯಾನೇಜರ್ ಅವರು ಈ ಕುರಿತು ದಿ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದು, ಮಾರಣಾಂತಿಕ ರೋಗಗಳಿಂದ ಜನರನ್ನು ಬದುಕಿಸಲು ಪವಿತ್ರ ದೇವತೆಗಳ ಪೂಜೆಯನ್ನು ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ತಮಿಳುನಾಡಿನಲ್ಲಿ ಪ್ಲೇಗ್ ತಲೆದೂರಿದಾಗ ಪ್ಲೇಗ್ ಮಾರಿಯಮ್ಮನ್ ದೇವಸ್ಥಾನ ಪ್ರತಿಷ್ಠಾಪಿಸಲಾಗಿತ್ತು. ಕೊರೋನಾ ಹಿನ್ನೆಲೆ ಈಗ ಕೊರೋನಾ ದೇವಿಯನ್ನು ಪ್ರತಿಷ್ಠಪಿಸಲಾಗಿದೆ ಎಂದು ತಿಳಿಸಿದ್ದಾರೆ.