ಗುಜರಾತ್ ಮುಂದಿನ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಕೇಜ್ರಿವಾಲ್
ಗುಜರಾತ್ ನಲ್ಲಿ ನೆಲೆ ವಿಸ್ತರಿಸಲು ಆಮ್ ಆದ್ಮಿ ನಿರ್ಧಾರ

ದೆಹಲಿಯಲ್ಲಿ ನೆಲೆ ಕಂಡುಕೊಂಡಿರುವ ಆಮ್ ಆದ್ಮಿ ಪಾರ್ಟಿ ಇದೀಗ ಗುಜರಾತ್ ಕಡೆಗೂ ತನ್ನ ನೆಲೆ ವಿಸ್ತರಿಸಲು ಅಂಬಲಿಸುತ್ತಿದೆ. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಗುಜರಾತ್ ರಾಜ್ಯದ 182 ಕ್ಷೇತ್ರಗಳಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ ಗೆ ಭೇಟಿ ನವರಂಗಪುರದಲ್ಲಿ ಆಮ್ ಆದ್ಮಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ನಲ್ಲಿ ಪಕ್ಷ ಸಂಘಟನೆಗೆ ನಾವು ಮುಂದಾಗಿದ್ದು, ಮುಂಬರುವ ಚುನಾವಣೆಯಲ್ಲಿ ಗುಜರಾತ್ ಜನ ನಮ್ಮನ್ನು ಬೆಂಬಲಿಸಲಿದ್ದಾರೆ, ಗುಜರಾತ್ ನಲ್ಲಿರುವ ರೈತರ ಸಮಸ್ಯೆ, ನಿರುದ್ಯೋಗವನ್ನು ನಿವಾರಿಸಲು ನಮ್ಮ ಪಕ್ಷ ಶ್ರಮಿಸಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಗುಜರಾತ್ ಜನತೆ ವಿಶ್ವಾಸ ಕಳೆದುಕೊಂಡಿದ್ದು, ಹೊಸ ಆಡಳಿತವನ್ನು ನೋಡಲು ಬಯಸುತ್ತಿದ್ದಾರೆ. ದೆಹಲಿಯ ಆಡಳಿತ ಮಾದರಿಯನ್ನು ಇಲ್ಲಿಗೆ ತರುವುದಿಲ್ಲ, ಗುಜರಾತ್ ಆಡಳಿತದ ಮಾದರಿಯನ್ನು ಇಲ್ಲಿನ ಜನರೇ ನಿರ್ಧರಿಸಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.