ಕೋವಿಡ್ ನಿಂದ ಚೇತರಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ

ಅಸ್ಸಾಂನ ಚರೈದಿಯೋ ಜಿಲ್ಲೆಯಲ್ಲಿ ಅಮಾನವೀಯ ಘಟನೆ

 | 
Representative Image

ಚರೈದಿಯೋ: ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ಮಹಿಳೆಯನ್ನು ಯುವಕರ ಗುಂಪ್ಪೊಂದು ಸಾಮೂಹಿತ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಅಸ್ಸಾಂನ ಚರೈದಿಯೋ ಜಿಲ್ಲೆಯಲ್ಲಿ ನಡೆದಿದೆ.

ಬೊರ್ಹಾತ್ ನಾಗರಮತಿ ಪ್ರದೇಶದ ಚಹ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆಗೆ ಕೆಲ ದಿನಗಳ ಹಿಂದೆ ಕೊರೋನಾ ದೃಢಪಟ್ಟಿತ್ತು. ಆಕೆಯ ಪತಿ ಮತ್ತು ಮಗಳಿಗೂ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಸಾಪೇಕಾತಿ ಮಾಡೆಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯಿಂದ ಗುಣಮುಖರಾದ ಮಹಿಳೆಯ ಪತಿ ಮೇ 27ರಂದು ಆಸ್ಪತ್ರೆಯಿಂದ ಮರಳಿದ್ದರು.

29ನೇ ತಾರೀಖು ಶನಿವಾರದಂದು ಮಹಿಳೆ ಮತ್ತು ಮಗಳು ಕೂಡ ಆಸ್ಪತ್ರೆಯಿಂದ ಬಿಡುಗಡೆಯಾದರು. ಆಸ್ಪತ್ರೆಯಿಂದ ಮನೆಗೆ ತೆರಳಲು ಮಹಿಳೆ ಮತ್ತು ಆಕೆಯ ಮಗಳಿಗೆ ಯಾವುದೇ ವಾಹನ ವ್ಯವಸ್ಥೆ ಇರಲಿಲ್ಲ. ಮಹಿಳೆ ಆಸ್ಪತ್ರೆಯವರ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಆಸ್ಪತ್ರೆಯವರು ಮಹಿಳೆ ಮನವಿಗೆ ಸ್ಪಂದಿಸಿಲ್ಲ.

ಆಸ್ಪತ್ರೆಯಿಂದ 25 ಕಿಲೋಮೀಟರ್ ದೂರವಿದ್ದ ತನ್ನ ಮನೆಗೆ ತೆರಳಲು ಬೇರೆ ದಾರಿಯಿಲ್ಲದೆ ಮಹಿಳೆ ತನ್ನ ಮಗಳ ಜೊತೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ವೇಳೆ ಯುವಕರ ಗುಂಪೊಂದು ಮಹಿಳೆಯ ಬೆನ್ನತ್ತಿ ಆಕೆಯ ಮಗಳ ಮುಂದೆಯೇ ಬರ್ಬರವಾಗಿ ಅತ್ಯಾಚಾರವೆಸಗಿದ್ದಾರೆ.

ನಮ್ಮ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದ ನಂತರ ನಮ್ಮನ್ನು ಆಸ್ಪತ್ರೆ ಅಧಿಕಾರಿಗಳು ಮನೆಗೆ ತೆರಳಲು ಹೇಳಿದರು, ನಾವು ಮನೆಗೆ ತೆರಳಲು ಆಂಬ್ಯುಲೆನ್ಸ್ ಕೇಳಿದೆವು, ಆದ್ರೆ ಅದನ್ನು ನಿರಾಕರಿಸಿದರು. ನಾವು ಆಸ್ಪತ್ರೆಯಿಂದ ಬಿಡುಗಡೆಯಾದಾಗ ಮಧ್ಯಾಹ್ನ 2.30 ಆಗಿತ್ತು. ನಾವು ಕೋವಿಡ್ ಕರ್ಫ್ಯೂ ಇರೋದ್ರಿಂದ ಇಂದು ಇಲ್ಲೆ ಇರ್ತೀವಿ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಕೇಳಿದೆವು ಆದ್ರೆ ಅವರು ಬೇಡವೆಂದರು ಎಂದು ಸಂತ್ರಸ್ಥೆಯ ಮಗಳು ಎನ್ಡಿಟಿವಿಗೆ ಹೇಳಿದ್ದಾರೆ.

ನಾವು ನೆಡೆದುಕೊಂಡೇ ಹೋಗುತ್ತಿದ್ದವು, ಸ್ವಲ್ಪ ಸಮಯದ ನಂತರ ಇಬ್ಬರು ನಮ್ಮನ್ನ ಹಿಂಬಾಲಿಸಿದರು, ನಾವು ಓಡಿದೆವು ಆದರೆ ನನ್ನ ತಾಯಿಯನ್ನು ಕಾಮುಕರು ಹಿಡಿದು ದೂರು ತೆಗೆದುಕೊಂಡು ಹೋದರು. ನಾನು ಹೇಗೋ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿಹೋಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದೆ. ರಡು ಗಂಟೆಯ ನಂತರ ನಮ್ಮಮ್ಮ ಸಿಕ್ಕಿದರು ಎಂದು ಹೇಳಿದ್ದಾಳೆ. ಗ್ರಾಮಸ್ಥರು ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಗ್ರಾಮಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.