ಸೆಂಟ್ರಲ್ ವಿಸ್ತಾ ಯೋಜನೆ ವಿರೋಧಿಸಿ ಕಾಂಗ್ರೆಸ್ ಮಾಡುತ್ತಿರುವುದೇನು?

ಕಾಂಗ್ರಸ್ ಗೆ ಬಿಜೆಪಿಯ ನೇರ ಪ್ರಶ್ನೆ

 | 
Representative Image of BJP

ಬೆಂಗಳೂರು: ಪ್ರಧಾನಿ ಮೋದಿ ಸರ್ಕಾರ ‌ರೂಪಿಸುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮಾಡುತ್ತಿರುವುದೇನು? ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಗಳ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲವೇಕೆ? ಎಂದು ಬಿಜೆಪಿ ಕಿಡಿ ಕಾರಿದೆ.

ಸೆಂಟ್ರಲ್ ವಿಸ್ತಾ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಅಧಿಕಾರದಲ್ಲಿದ್ದಾಗ & ಅಧಿಕಾರದಲ್ಲಿಲ್ಲದಿದ್ದಾಗ ಕಾಂಗ್ರೆಸ್ ಚಾಚೂ ತಪ್ಪದೆ ಮಾಡುವ ಒಂದೇ ಒಂದು ಕೆಲಸವೆಂದರೆ ದೇಶದ ಹಿತಾಸಕ್ತಿಯ ವಿರುದ್ಧ ಕಾರ್ಯಾಚರಿಸುವುದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದ ಕಾಂಗ್ರೆಸ್‌ ಈಗ ನೂತನ ಸಂಸತ್‌ ಭವನಕ್ಕೆ ವಿರೋಧಿಸುತ್ತಿದೆ ಎಂದು ಹೇಳಿದೆ.

ಸೆಂಟ್ರಲ್‌ ವಿಸ್ಟಾ ಯೋಜನೆ & ಕಾಂಗ್ರೆಸ್‌ ಪಕ್ಷ ಎಂದು ಉದಾಹರಣೆ ನೀಡಿರುವ ಬಿಜೆಪಿ, ರಾಜಸ್ಥಾನದಲ್ಲಿ 266 ಕೋಟಿ ವೆಚ್ಚದಲ್ಲಿ ಶಾಸಕರ ಭವನ ನಿರ್ಮಾಣ, ಮಹಾರಾಷ್ಟ್ರದಲ್ಲಿ 900 ಕೋಟಿ ವೆಚ್ಚದಲ್ಲಿ ಶಾಸಕರ ವಸತಿ ನಿರ್ಮಾಣ ಆದರೆ, ದೇಶದ ಪ್ರಜಾಪ್ರಭುತ್ವದ ಸಂಕೇತವಾಗಲಿರುವ ನೂತನ ಸಂಸತ್‌ ಭವನಕ್ಕೆ ಮಾತ್ರ ಕಾಂಗ್ರೆಸ್‌ ವಿರೋಧ ಮಾಡುತ್ತಿದೆ ಎಂದು ತಿಳಿಸಿದೆ.

ಕಾಂಗ್ರೆಸ್‌ ಇಂದು ಏನನ್ನು ತಪ್ಪು ಎಂದು ಬಿಂಬಿಸುತ್ತಿದೆಯೋ ಆ ತಪ್ಪುಗಳನ್ನು ನೆಹರೂ ಕಾಲದಿಂದಲೂ ಮಾಡುತ್ತಲೇ ಬಂದಿದೆ. ನೆಹರೂ ಸ್ಮಾರಕ - 52 ಎಕರೆ ಇಂದಿರಾ ಸ್ಮಾರಕ - 45 ಎಕರೆ ರಾಜೀವ್‌ ಸಮಾಧಿ - 15 ಎಕರೆ ಆದರೆ, ಇದಕ್ಕಿಂತ ಕಡಿಮೆ ಜಾಗ ವಿನಿಯೋಗವಾಗಲಿರುವ ಸೆಂಟ್ರಲ್‌ ವಿಸ್ಟಾ ಯೋಜನೆಗೆ ಕಾಂಗ್ರೆಸ್ ವಿರೋಧವೇಕೆ? ಎಂದು ಫ್ರಶ್ನಿಸಿದೆ.

ದೇಶದಲ್ಲಿ ಕೋವಿಡ್ ಸಂಕಷ್ಟವಿದ್ದರೂ ಇಟಲಿಯಲ್ಲಿ ಕೋವಿಡ್ ಲಸಿಕೆ ನೀಡಲು ಆರಂಭಿಸಿದ ದಿನದಂದೇ ಕಾಂಗ್ರೆಸ್ ಯುವರಾಜ‌ ರಾಹುಲ್ ಗಾಂಧಿ ಇಟಲಿ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಇಂತಹ ವ್ಯಕ್ತಿಗಳು ಇಂದು, ದೇಶ ಸಂಕಷ್ಟದಲ್ಲಿರುವಾಗ ಸೆಂಟ್ರಲ್ ವಿಸ್ಟಾದಂತಹ ಕಾಮಗಾರಿಗಳು ಅನಗತ್ಯ ಎನ್ನುವುದು ಹಾಸ್ಯಾಸ್ಪದ ಎಂದು ಗೇಲಿ ಮಾಡಿದೆ.