ಹೆಲ್ತ್ ಬುಲೆಟಿನ್ ಲೆಕ್ಕಕ್ಕೂ ಸ್ಮಶಾನದ ಲೆಕ್ಕಕ್ಕೂ ಅಜಗಜಾಂತರ.!!
ಬೆಳಗಾವಿಯಲ್ಲಿ ಹಾದಿ ತಪ್ಪಿದ ಸಾವಿನ ಲೆಕ್ಕ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದೆ. ಜಿಲ್ಲಾಡಳಿತದ ಹೆಲ್ತ್ ಬುಲೆಟಿನ್ ಲೆಕ್ಕಕ್ಕೂ ಸ್ಮಶಾನದ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ. ಸರಕಾರದ ಲೆಕ್ಕದಲ್ಲಿ ಸಾವಿನ ಸಂಖ್ಯೆಗೂ ನಿಜವಾದ ಸಾವಿನ ಸಂಖ್ಯೆಗೂ ಭಾರಿ ವ್ಯತ್ಯಾಸ ಕಂಡು ಬರುತ್ತಿದೆ.
ಅಂಜುಮನ್ ಇಸ್ಲಾಂ ಸ್ಮಶಾನದಲ್ಲಿ ನಿನ್ನೆ ಒಂದೇ ದಿನ 28 ಜನರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇಂದು ಬೆಳಗ್ಗೆಯಿಂದ ಆರು ಜನರ ಅಂತ್ಯಕ್ರಿಯೆ ನಡೆಸಲಾಗಿದೆ. ಇದರಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ 22 ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇನ್ನು ಸದಾಶಿವ ನಗರದ ಸ್ಮಶಾನದಲ್ಲಿ 11 ಕೋವಿಡ್ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಫಯಿಮ್ ನಾಯಿಕವಾಡಿ ಮಾಹಿತಿ ನೀಡಿದ್ದಾರೆ.
ಅಂಜುಮನ್ ಖಬರಸ್ತಾನ್‍ನಲ್ಲಿ ನಿತ್ಯವೂ ಸಾಲು ಸಾಲು ಅಂತ್ಯಕ್ರಿಯೆಗಳು ನಡೆಯುತ್ತಿವೆ. ನಿತ್ಯವೂ 3 ರಿಂದ 4 ಮೃತದೇಹಗಳ ಅಂತ್ಯಸಂಸ್ಕಾರ ನಡೆಸುವ ಸ್ಮಶಾನದಲ್ಲಿ ದಿನಕ್ಕೆ 20ಕ್ಕೂ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೋವಿಡ್‍ನಿಂದ ಮೃತಪಟ್ಟವರ ಸರಿಯಾದ ಲೆಕ್ಕ ಕೊಡ್ತಿಲ್ವಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಬುಧವಾರದ ಹೆಲ್ತ್ ಬುಲೆಟಿನ್ ನಲ್ಲಿ ಕೋವಿಡ್‍ನಿಂದ ಇಬ್ಬರು ಮಾತ್ರ ಮೃತಪಟ್ಟಿರೋದಾಗಿ ಮಾಹಿತಿ ನೀಡಲಾಗಿದೆ. ಆದರೆ ವಸ್ತು ಸ್ಥಿತಿಯೇ ಬೇರೆಯಾಗಿದೆ. ಸಾವಿನ ಲೆಕ್ಕ ತಪ್ಪುತ್ತಿದೆ.