ಸೋಮವಾರದಿಂದ ದೆಹಲಿ ಹಂತಹಂತವಾಗಿ ಅನ್ ಲಾಕ್: ಸಿಎಂ ಕೇಜ್ರಿವಾಲ್
ಸೋಂಕು ಗಣನೀಯ ಇಳಿಕೆ ಹಿನ್ನಲೆ ನಿರ್ಧಾರ ಎಂದು ದೆಹಲಿ ಸಿಎಂ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಇಳಿಕೆಯಾಗಿರುವ ಹಿನ್ನಲೆ ಇದೇ ಸೋಮವಾರದಿಂದ ಹಂತಹಂತವಾಗಿ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಕೇಜ್ರಿವಾಲ್ ಅವರು, ಕೊರೋನಾ ವೈರಸ್ ವಿರುದ್ಧದ ಹೋರಾಟ ಕೊನೆಗೊಂಡಿಲ್ಲ, ಆದರೆ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆ ಸೋಮವಾರದಿಂದ ಹಂತಹಂತವಾಗಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೆಹಲಿಯ ಕೋವಿಡ್ ಪಾಸಿಟಿವಿಟಿ ಪ್ರಮಾಣ 1.5% ಮಾತ್ರ ಇದ್ದು, ಕೇವಲ 1,100 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಹಾಲಿ ಲಾಕ್ ಡೌನ್ ಸೋಮವಾರಕ್ಕೆ ಅಂತ್ಯವಾಗಲಿದ್ದು, ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಅನ್ ಲಾಕ್ ಪ್ರಕ್ರಿಯೆ ಮೊದಲ ಭಾಗವಾಗಿ ಕಟ್ಟಡ ನಿರ್ಮಾಣ ಚಟುವಟಿಕೆ ಮತ್ತು ಕಾರ್ಖಾನೆಗಳನ್ನು ತೆರೆಯಲಾಗುತ್ತದೆ. ಇದರಿಂದ ದಿನಗೂಲಿ ಮತ್ತು ವಲಸೆ ಕಾರ್ಮಿಕರಿಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಹಂತ ಹಂತವಾಗಿ ಲಾಕ್ಡೌನ್ ಸಡಿಲ ಮಾಡಲಾಗುತ್ತಿದೆ ಎಂದ ಮಾತ್ರಕ್ಕೆ ಜನ ಅನಗತ್ಯ ಓಡಾಡಬಾರದು. ವಿನಾಯಿತಿ ನೀಡಿದ ಹೊರತಾದ ಕ್ಷೇತ್ರಗಳಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಮುಂದುವರೆಯಲಿದೆ ಎಂದು ಕೇಜ್ರಿವಾಲ್ ಎಚ್ಚರಿಸಿದ್ದಾರೆ.