ಬ್ಲಾಕ್ ಫಂಗಸ್ ಗೆ ಯಾರೂ ಭಯಪಡಬೇಡಿ: ಸಚಿವ ಡಾ. ಕೆ. ಸುಧಾಕರ್

ಬ್ಲಾಕ್ ಫಂಗಸ್ ಸಾಂಕ್ರಾಮಿಕವಲ್ಲ, ಯಾರೂ ಭಯಪಡುವ ಅವಶ್ಯಕತೆ ಇಲ್ಲ

 | 
D. K sudhakar

ದಾವಣಗೆರೆ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಂಡಿದೆ. ಇದು ಸಾಂಕ್ರಾಮಿಕ ರೋಗವಲ್ಲ. ಆದ್ದರಿಂದ ದರ ಬಗ್ಗೆ ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ದಾವಣೆಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲೂ 15 ರಿಂದ 20 ಜನರಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಬ್ಲಾಕ್ ಫಂಗಸ್ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯುವಂತೆ ಮಾಡಲಾಗಿದೆ. ಇದಕ್ಕೆ ಅಗತ್ಯವಿರುವ ಔಷಧಿ ಪೂರೈಕೆಗೂ ಕ್ರಮ ವಹಿಸಲಾಗಿದೆ ಎಂದರು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು, ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಮಧುಮೇಹ ಮುಂತಾದ ಕಾರಣಗಳಿಂದ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ. ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ ಎಂದು ಹೇಳಿದರು.

ನಂತರ ಮಾತನಾಡಿದ ಅವರು ಬ್ಲ್ಯಾಕ್ ಫಂಗಸ್ ಬಗ್ಗೆ ಮಾಧ್ಯಮಗಳು ದಯವಿಟ್ಟು ವೈಭವೀಕರಿಸಬಾರದು. ಈಗಾಗಲೇ ಕೋವಿಡ್‍ನಿಂದ ಮಾನಸಿಕವಾಗಿ ಆತಂಕದಲ್ಲಿರುವ ಸಮಾಜದಲ್ಲಿ ಇನ್ನಷ್ಟು ಭಯದ ವಾತಾವರಣ ಕಲ್ಪಿಸಬೇಡಿ ಎಂದು ಸುಧಾಕರ್ ಮನವಿ ಮಾಡಿದ್ದಾರೆ.