ಮೈಸೂರಿನ ಪಿರಿಯಾಪಟ್ಟಣದಲ್ಲಿ ಮರ್ಯಾದಾಗೇಡು ಹತ್ಯೆ
ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ

ಮೈಸೂರು: ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಮರ್ಯಾದೆಗಾಗಿ ಅಂಜಿದ ಪಾಪಿ ತಂದೆಯೋರ್ವ ತನ್ನ ಮಗಳನ್ನು ಅಮಾನುಷ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಕೊಲೆಯಾದ ಯುವತಿ ಪಿರಿಯಾಪಟ್ಟಣದ ಗೊಲ್ಲರ ಬೀದಿಯ 21 ವರ್ಷದ ಯುವತಿ ಗಾಯತ್ರಿ ಎಂದು ಗುರುತಿಸಲಾಗಿದೆ. ಈಕೆಯ ತಂದೆ ಜಯರಾಮ್ ತನ್ನ ಮಗಳನ್ನೆ ಕೊಲೆ ಮಾಡಿದ್ದು, ಪೊಲೀಸ್ ಠಾಣೆಗೆ ತಾನೆ ಬಂದು ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಪಿಯುಸಿ ಓದುತ್ತಿದ್ದ ಯುವತಿ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲೆ ತಂದೆ ತಾಯಿ ಜೊತೆಗಿದ್ದಳು ಎನ್ನಲಾಗಿದೆ. ಈ ವೇಳೆ ತನ್ನದೇ ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ತಿಳಿದ ಯುವತಿಯ ಕುಟುಂಬಸ್ಥರು ಯವಕನಿಂದ ದೂರ ಇರುವಂತೆ ಯುವತಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಇದನ್ನು ಪರಿಗಣಿಸದ ಯುವತಿ ಯುವಕನೊಂದಿಗೆ ಒಡನಾಟ ಮುಂದುವರೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗಾಗಿ ಊಟ ತೆಗೆದುಕೊಂಡ ಗಾಯತ್ರಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಯುವತಿಯ ಪ್ರೀತಿಯ ವಿಷಯದ ಕುರಿತು ಮಾತುಕತೆಯಾಗಿದೆ. ಆದರೆ ಯುವತಿ, ತಾನು ಯಾವುದೇ ಕಾರಣಕ್ಕೂ ಯುವಕನ ಸಂಬಂಧವನ್ನು ಬಿಡುವುದಿಲ್ಲ ಎಂದು ಹಠ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಯುವತಿಯ ತಂದೆ ಜಯರಾಮ್ ಮಚ್ಚಿನಿಂದ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.