ಭಾರತದ ಮೊದಲ ಮಹಿಳಾ ಲಾರಿ ಡ್ರೈವರ್ ಯೋಗಿತಾ ರಘುವಂಶಿ

ಚಾಲಕಿಯೂ ನಾನೇ, ಟ್ರಕ್ ಮಾಲಕಿಯೂ ನಾನ: ಯೋಗಿತಾ ರಘುವಂಶಿ
 | 
ಭಾರತದ ಮೊದಲ ಮಹಿಳಾ ಲಾರಿ ಡ್ರೈವರ್ ಯೋಗಿತಾ ರಘುವಂಶಿ

ಅದು 2003 ಭೂಪಾಲ್ ಹೈಕೋರ್ಟ್ ನಲ್ಲಿ ಲಾಯರ್ ಆಗಿ ಕೆಲಸ ಮಾಡುತ್ತಿದ್ದ ಗಂಡ ದಿಡೀರ್ ರಸ್ತೆ ಅಪಘಾತದಲ್ಲಿ ಮರಣಹೊಂದುತ್ತಾರೆ. ಪತಿಯ ಶವಸಂಸ್ಕಾರಕ್ಕೆಂದು ದಾವಿಸುತ್ತಿದ್ದ ಯೋಗಿತಾಳ ಇಬ್ಬರು ಸಹೋದರರೂ ಸಹ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಗಂಡ ಮತ್ತು ಇಬ್ಬರ ಸಹೋದರರ ಸಾವುಗಳು 33 ವರ್ಷದ ಯೋಗಿತಾರನ್ನು ದಿಕ್ಕೆಡಿಸುತ್ತದೆ. ಗಂಡನ ಮನೆಯವರು ಆತನ ಆಸ್ತಿ ಮತ್ತು ಮನೆಯನ್ನು ಕಿತ್ತುಕೊಳ್ಳುತ್ತಾರೆ. ಯೋಗಿತಾ ತಂದೆಯ ಕಾನೂನಾತ್ಮಕ ಹೋರಾಟದಿಂದ ಗಂಡನ ಹೆಸರಲ್ಲಿದ್ದ ಮೂರು ಲಾರಿಗಳು ಯೋಗಿತಾಳ ಜೀವನ ನಿರ್ವಹಣೆಗೆ ಸಿಗುತ್ತವೆ. ಎಂಟು ವರ್ಷದ ಮಗಳು ಯಶಿಕಾ, ನಾಲ್ಕು ವರ್ಷದ ಮಗ ಯಾಶಿನ್ ಭವಿಷ್ಯ ರೂಪಿಸುವ ಜವಾಬ್ದಾರಿ ಯೋಗಿತಾ ಮೇಲೆ ಬೀಳುತ್ತದೆ.

ಹೀಗಾಗಿ ತನ್ನ ಗಂಡನ ಹೆಸರಲ್ಲಿದ್ದ ಟ್ರಾನ್ಸಪೋರ್ಟ್ ಕಂಪನಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಳ್ಳುತ್ತಾಳೆ. ಬೇರೆ ಚಾಲಕರುಗಳನ್ನು ನೇಮಿಸಿಕೊಂಡು ಲಾರಿಗಳ ವ್ಯವಹಾರ ಪ್ರಾರಂಭಿಸುತ್ತಾಳೆ. ಹೀಗೆ ಚಾಲಕರನ್ನು ನೇಮಿಸಿಕೊಂಡ ನಂತರ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಯೋಗಿತಾಗೆ ಎಲ್ಲೋ ಏನೋ ಸಮಸ್ಯೆಯಾಗುತ್ತಿದೆ ಅನ್ನಿಸತೊಡಗಿತು. ಅವಳ ಲೆಕ್ಕಾಚಾರಕ್ಕೂ ಡ್ರೈವರುಗಳ ಲೆಕ್ಕಕ್ಕೂ ತಾಳೆಯಾಗುತ್ತಿರಲಿಲ್ಲ. ಗಂಡನ ವೃತ್ತಿಯಾದ ವಕೀಲಿಕೆ ಮಾಡಿದರೂ ಕುಟುಂಬದ ನಿರ್ವಹಣೆಗೂ ದುಡಿಮೆ ಸಾಕಾಗುತ್ತಿರಲಿಲ್ಲ. ಹೀಗಾಗ ತಾನೇ ಡ್ರೈವಿಂಗ್ ಕಲಿತು ತನ್ನ ಲಾರಿಗಳನ್ನು ತಾನೇ ಓಡಿಸಲು ಸಜ್ಜಾದಳು. ಇದೀಗ 15ನೇ ವರ್ಷದ ಅನುಭವದಲ್ಲಿ ದೇಶದ ಮೊದಲ ಮಹಿಳಾ ಪದವೀಧರ ಟ್ರಕ್ ಡ್ರೈವರ್ ಯೋಗಿತಾ ಎಂದು ದೇಶದ ಗಮನ ಸೆಳೆದಿದ್ದಾಳೆ.

ನಾನು ಟ್ರಕ್ ಓಡಿಸುತ್ತೇನೆ ಎಂದರೆ ಯಾರೂ ನಂಬುವುದಿಲ್ಲ. ಟ್ರಕ್ ಡ್ರೈವರನ ಹೆಂಡತಿ ಇರಬೇಕು ಅಂದುಕೊಳ್ಳುತ್ತಾರೆ. ಗಾಡಿ ಪಂಕ್ಚರ್ ಹಾಕಬೇಕೆಂದು ಪಂಕ್ಚರ್ ಶಾಪ್ ಹುಡುಗರನ್ನು ಕೇಳಿದರೆ ಅವರು ಸ್ಕೂಟಿಯೋ ಕಾರೋ ಇರಬೇಕೆಂದು ಸುತ್ತಮುತ್ತ ಹುಡುಕುತ್ತಾರೆ. ಆದರೆ ನಾನು ಹತ್ತು ಗಾಲಿಗಳ ದೊಡ್ಡ ಟ್ರಕ್ ತೋರಿಸುತ್ತೇನೆ. ಆಗ ಅವರು ಅಚ್ಚರಿಯಿಂದ ನನ್ನನ್ನು ನೋಡುತ್ತಾರೆ’ ಎನ್ನುತ್ತಾ ಯೋಗಿತಾ ನಗುತ್ತಾಳೆ.

ರಸ್ತೆಗಳಲ್ಲಿ ಆರ್.ಟಿ.ಓ ಪೋಲೀಸರಿಗೆ ನಾನು ಲಂಚ ಕೊಡುವುದಿಲ್ಲ. ಲಂಚ ತೆಗೆದುಕೊಳ್ಳುವ ಸಂಸ್ಕೃತಿಯನ್ನು ಈ ನಮ್ಮ ಲಾರಿ ಟ್ರಕ್ ಡ್ರೈವರುಗಳೇ ಬೆಳೆಸಿದ್ದಾರೆ. ಚಾಲಕಿಯೂ ನಾನೇ, ಟ್ರಕ್ ಮಾಲಕಿಯೂ ನಾನೇ ಆಗಿರುವ ಕಾರಣ ಎಲ್ಲಾ ಬಗೆಯ ದಾಖಲೆಗಳನ್ನು ಹಾಜರಿ ಪಡಿಸುತ್ತೇನೆ. ಇಷ್ಟಾಗಿಯೂ ಲಂಚ ಕೇಳಿದರೆ ಅಲ್ಲಿನ ಪೋಲೀಸರ ಫೋಟೋ ತೆಗೆದುಕೊಂಡು ಹತ್ತಿರದ ಪೋಲೀಸ್ ಸ್ಟೇಷನ್ನಿನಲ್ಲಿ ಕಂಪ್ಲೇಂಟ್ ಕೊಡುತ್ತೇನೆ ಎನ್ನುತ್ತಾರೆ. ಹೀಗಾಗಿಯೇ ಯೋಗಿತಾ ಟ್ವಿಟರ್ ನಲ್ಲಿ ಇಡೀ ದೇಶದಾದ್ಯಾಂತ ರಸ್ತೆಯ ಪಕ್ಕದಲ್ಲಿ ನಡೆಯುವ ಪೋಲೀಸರ ದಬ್ಬಾಳಿಕೆಯನ್ನು ತಡೆಯಿರಿ, ಹೀಗೆ ರಸ್ತೆಯ ಬಳಿ ನಿಂತು ನಡೆಸುವ ತಪಾಸಣೆ ಮಾದರಿಯನ್ನು ನಿಷೇಧಿಸಿ ಎಂದು ಅಭಿಯಾನ ಮಾಡಿದ್ದಾಳೆ.

ಲೋಡ್ ಗಳನ್ನು ಕಾರ್ಖಾನೆಗಳಿಗೆ ತಲುಪಿಸಿದಾಗ ಅಲ್ಲಿ ಮಹಿಳೆಯರಿಗಾಗಿ ಶೌಚಾಲಯ ಇಲ್ಲದ ಕಡೆಗಳಲ್ಲಿ ಕಂಪನಿಗಳ ಜತೆ ಜಗಳ ಮಾಡಿ ಮಹಿಳಾ ಶೌಚಾಲಯಗಳನ್ನು ಕಟ್ಟಿಸಲು ಒತ್ತಡ ಹೇರಿದ್ದಾಳೆ. ಇಡೀ ಹೆದ್ದಾರಿಯ ಸೌಲಭ್ಯಗಳಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳಿರುವುದು ತುಂಬಾ ಕಡಿಮೆ. ಹೆದ್ದಾರಿಗಳು ಗಂಡಸು ಡ್ರೈವರುಗಳಿಗಾಗಿ ಸಿದ್ಧಗೊಂಡಂತೆ ಕಾಣುತ್ತದೆ. ಈ ಕಾರಣಕ್ಕೆ ನನ್ನ ಮಗಳು ಟ್ರಕ್ ಡ್ರೈವಿಂಗನ್ನು ವೃತ್ತಿಯನ್ನಾಗಿಸಿಕೊಳ್ಳುವುದು ಇಷ್ಟವಿಲ್ಲ ಎಂದು ಯೋಗಿತಾ ಹೇಳುತ್ತಾರೆ.

ನನ್ನ ವೃತ್ತಿಜೀವನದ ಅನುಭವದಲ್ಲಿ ಹೇಳುವುದಾದರೆ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆ ಗಂಡಿಗಿಂತ ಶಕ್ತಿಶಾಲಿ. ಅವಳಿಗೆ ಸರಿಯಾದ ಶಿಕ್ಷಣ ಸಿಗಬೇಕಷ್ಟೇ. ಬೇರೆ ಮಹಿಳೆಯರೂ ಟ್ರಕ್ಸ್ ಡ್ರೈವರ್ಸ್ ಆಗಿ ಬರುವುದನ್ನು ಸ್ವಾಗತಿಸುತ್ತೀರಾ ಎಂದರೆ, ಖಂಡಿತಾ ಮಹಿಳೆಯರು ಟ್ರಕ್ ಡ್ರೈವಿಂಗ್ ಗೆ ಬರಬೇಕು. ಆದರೆ ಬಹುತೇಕ ಮಹಿಳೆಯರು ಮನೆಯಲ್ಲಿರಲು ಬಯಸುತ್ತಾರೆ, ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವ ಸವಾಲುಗಳಿಗೆ ಬಹುಪಾಲು ಮಹಿಳೆಯರು ಸಿದ್ದರಿಲ್ಲ ಎನ್ನುತ್ತಾರೆ.

ನಾನು ಏನಾದರೂ ವಿಶೇಷ ಸಾಧನೆ ಮಾಡಬೇಕೆಂಬ ಆಸೆಯಲ್ಲಿ ಟ್ರಕ್ ಓಡಿಸಲು ಮುಂದಾಗಲಿಲ್ಲ. ನನ್ನ ಬದುಕಿನ ಸಂದರ್ಭಗಳು ಅನಿವಾರ್ಯವಾಗಿ ಟ್ರಕ್ ಡ್ರೈವಿಂಗ್ ಗೆ ಬರುವಂತೆ ಮಾಡಿದವು. ಹಾಗಾಗಿ ನನ್ನನ್ನು ಏನೋ ಮಹತ್ಸಾದನೆ ಮಾಡಿದ್ದಾಳೆಂದು ದಯವಿಟ್ಟು ಬಿಂಬಿಸಬೇಡಿ’ ಎಂದು ಯೋಗಿತಾ ಪ್ರಾಮಾಣಿಕವಾಗಿ ಹೇಳುತ್ತಾಳೆ.

ಇಡೀ ವೃತ್ತಿ ಜೀವನದಲ್ಲಿ ಹತ್ತು ದಿನಗಳ ಕಾಲ ಪಯಣಿಸಿದ `ಭೂಪಾಲ್-ಕೇರಳ-ಜಮ್ಮು-ಜಲಂಧರ್-ಇಂದೋರ್-ಭೂಪಾಲ್’ ಪಯಣ ದೊಡ್ಡದು ಎನ್ನುತ್ತಾಳೆ. ನಾನು ಹೈವೇಗಳಲ್ಲಿ ಡ್ರೈವಿಂಗ್ ಮಾಡುತ್ತಾ ಪಯಣಿಸುತ್ತಿರುವಾಗ ಡೋರ್ ಲಾಕ್ ಆಗಿರುವ ಶಾಲೆಗಳ ಗೇಟ್ ಎದುರು ಕಾಯುತ್ತಿರುವ ಮಕ್ಕಳನ್ನು ಕಂಡು ಮನಸ್ಸು ಮರುಗುತ್ತದೆ. ಇಂತಹ ಮಕ್ಕಳಿಗೆ ಡ್ರೈವಿಂಗ್ ಕಲಿಸಬೇಕು ಎನ್ನುವ ಆಸೆಯಿದೆ, ಒಮ್ಮೆ ದೈರ್ಯ ಮಾಡಿ ಯಾವುದನ್ನೇ ಶುರು ಮಾಡಿದರೆ, ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ನನ್ನ ಬದುಕೇ ಸಾಕ್ಷಿಯಾಗಿದೆ ಎನ್ನುತ್ತಾರೆ.

ಇದೀಗ 47 ವರ್ಷದ ಯೋಗಿತಾ ಕಳೆದ 15 ವರ್ಷದಿಂದ ಭಾರತದ ಹೈವೆಗಳಲ್ಲಿ ಟ್ರಕ್ ಓಡಿಸುತ್ತಾ ಹೊಸ ಮಾದರಿಯೊಂದನ್ನು ಸೃಷ್ಠಿಸಿದ್ದಾರೆ. ರಸ್ತೆ ನನಗೆ ಬಹಳ ಕಲಿಸಿದೆ, ಹಾಗಾಗಿ ರಸ್ತೆಯೇ ನನ್ನ ಗುರು ಎನ್ನುತ್ತಾರೆ. 2013 ರಲ್ಲಿ ಈಕೆಯ ಸಾಹಸವನ್ನು ಗುರುತಿಸಿ ಮಹೀಂದ್ರಾ ಟ್ರಾನ್ಸ್ ಪೋರ್ಟ್ `ಟ್ರಾನ್ಸ್ ಪೋರ್ಟ್ ಎಕ್ಸಲೆನ್ಸ್’ ಅವಾರ್ಡ್ ಕೊಟ್ಟು ಮಹೇಂದ್ರ ಟ್ರಕ್ಕನ್ನು ಉಡುಗೊರೆಯಾಗಿ ನೀಡಿದೆ.

ಹೆಣ್ಣು ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವಂತಹ ಕ್ಷೇತ್ರಕ್ಕೆ ಬದುಕಿನ ಅನಿವಾರ್ಯತೆಗಾಗಿ ಪ್ರವೇಶಿಸಿದ ಯೋಗಿತಾ ಅವರು ಭಾರತದ ಹೈವೇ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆದಿದ್ದಾರೆ. ಅಕಸ್ಮಾತ್ ಯೋಗಿತಾ ಈ ಅನುಭವಗಳ ಆತ್ಮಕತೆ ಬರೆದರೆ ಅದೊಂದು ವಿಶಿಷ್ಟ ಅನುಭವ ಕಥನ ಆಗುತ್ತದೆ.