ಐದು ಹಂತಗಳಲ್ಲಿ ಅನ್ ಲಾಕ್ ಮಾಡಲು ಸರ್ಕಾರ ನಿರ್ಧಾರ

ಅನ್ ಲಾಕ್ ಪ್ರಕ್ರಿಯೆಗಳ ಬಗ್ಗೆ ಸುಳಿವು ನೀಡಿದ ಸಚಿವ ಆರ್. ಅಶೋಕ್

 | 
R Ashok

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಾರದಿಂದ ಲಾಕ್ ಡೌನ್ ತೆರವುಗೊಳಿಸುವ ಬಗ್ಗೆ ಸಚಿವ ಆರ್. ಅಶೋಕ್ ಸುಳಿವು ನೀಡಿದ್ದು, 4-5 ಹಂತಗಳಲ್ಲಿ ಅನ್ ಲಾಕ್ ಪ್ರಕ್ರಿಯೆಯ ಮೂಲಕ ನಿರ್ಬಂಧಗಳನ್ನು ಸಡಿಲಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತಂತೆ ಮಾತನಾಡಿದ ಅವರು, ಜೂನ್ 14ಕ್ಕೆ ಏಕಾಏಕಿ ಅನ್ ಲಾಕ್ ಪೂರ್ತಿ ಆಗುವುದಿಲ್ಲ, ಒಂದೇ ಸಲ ಅನ್ ಲಾಕ್ ಮಾಡಿದರೆ ನಿಯಮಗಳನ್ನು ಸಡಿಲ ಮಾಡಿದರೆ ಮತ್ತೆ ಕೊರೋನಾ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂದರು.

ಮೊದಲನೆಯದಾಗಿ ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಸಿದ್ದ ಸಮಯವನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸುವುದು, ಪಾರ್ಕ್ ಗಳಲ್ಲಿ ವಾಕಿಂಗ್ ವ್ಯಾಯಾಮಕ್ಕೆ ಅವಕಾಶ ನೀಡುವುದು ಹೀಗೆ ಹಂತ ಹಂತವಾಗಿ ಅನ್ ಲಾಕ್ ಮಾಡುವ ಯೋಜನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಹಂತಹಂತವಾಗಿ ಅನ್ ಲಾಕ ಮಾಡಲಾಗುತ್ತದೆ ಎಂದು ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನ್ ಲಾಕ್ ಬಗ್ಗೆ ತೀರ್ಮಾನ ಮಾಡುತ್ತಾರೆ. ಬೆಂಗಳೂರು ನಗರದಲ್ಲಿ ಪ್ರಸ್ತುತ 2 ಸಾವಿರದಷ್ಟು ಸಕ್ರಿಯ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ, ಅದು 500ರೊಳಗೆ ಇಳಿಕೆಯಾಗಬೇಕು ಎಂದು ತಿಳಿಸಿದ್ದಾರೆ.

ಅಂತರ್ ಜಿಲ್ಲೆ ಓಡಾಟ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಯಾವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆಯಿರುತ್ತದೆಯೋ ಅಲ್ಲಿ ಹಂತಹಂತವಾಗಿ ಅನ್ ಲಾಕ್ ನಡೆಸಲಾಗುವುದು. ಅಂತರ ಜಿಲ್ಲೆ, ಸಾರಿಗೆ ವ್ಯವಸ್ಥೆ ಓಡಾಟ ಆರಂಭ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಸಚಿವ ಆರ್. ಅಶೋಕ್ ಹೇಳಿದ್ದಾರೆ.