ಕೋವಿಡ್ ಪರೀಕ್ಷೆ ಕಡಿತಗೊಳಿ ಸರ್ಕಾರದಿಂದ ಮೂರನೇ ಅಲೆಗೆ ಆಹ್ವಾನ

ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

 | 
Covid test

ಬೆಂಗಳೂರು: ಕೋವಿಡ್ ಪರೀಕ್ಷೆಗಳನ್ನು ಕಡಿತ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಅಲೆಗೆ ಆಹ್ವಾನ ನೀಡುತ್ತಿದೆ ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ತಿಂಗಳ ಹಿಂದೆ ಪ್ರತಿದಿನ 1.9 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ಕೇವಲ 93,000ಕ್ಕೆ ಕೋವಿಡ್ ಪರೀಕ್ಷೆಗಳನ್ನು ಇಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ರಜ್ಯಕ್ಕೆ ಮತ್ತೊಂದು ಕೊರೋನಾ ಅಲೆಯನ್ನು ಆಹ್ವಾನಿಸುತ್ತಿದೆ ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಸೋಮವಾರ 97,236 ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, 38,603 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಗಳವಾರ 93,247 ಪರೀಕ್ಷೆಗಳನ್ನು ನಡೆಸಿದ್ದು, 30,309 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಏಪ್ರಿಲ್ 28 ರಂದು ನಡೆಸಿದ 1.72 ಲಕ್ಷ ಮತ್ತು ಏಪ್ರಿಲ್ 24 ರಂದು ನಡೆಸಿದ 1.9 ಲಕ್ಷ ಕೋವಿಡ್ ಪರೀಕ್ಷೆಗಳಿಗೆ ಇದು ತದ್ವಿರುದ್ಧವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದ ಸೋಂಕಿತರು ಸೋಂಕನ್ನು ಮತ್ತಷ್ಟು ಹರಡಬಹುದು ಎಂದು ಟಿಎಸಿ ಸದಸ್ಯ ಮತ್ತು ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಡಾ. ಗಿರಿಧರ ಆರ್ ಬಾಬು ಹೇಳಿದ್ದು, ನಾವು ಕೋವಿಡ್ ಮೂರನೇ ಅಲೆಯನ್ನು ಆಹ್ವಾನಿಸುತ್ತಿದ್ದೇವೆ. ಏಕೆಂದರೆ, ವೈರಸ್ ವೇಗವಾಗಿ ಹರಡಲಿದ್ದು, ಜನ ಸೋಂಕನ್ನು ಹರಡುತ್ತಿದ್ದಾರೆ. ನಾವು ಈ ಸಮಸ್ಯೆ ಪರಿಹರಿಸಲು ವ್ಯಾಪಕ ಪರೀಕ್ಷೆಯೊಂದೇ ಇದಕ್ಕಿರುವ ಏಕೈಕ ಪರಿಹಾರ ಎಂದು ಬಾಬು ತಿಳಿಸಿದ್ದಾರೆ.