ಕ್ಷೇತ್ರವೇ ಇಲ್ಲದ ಸಿದ್ದುಗಿಂತ ಡಿ.ಕೆ.ಶಿ ಅಥವಾ ಪರಂ ಸಿಎಂ ಆಗಲಿ

ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್​. ವಿಶ್ವನಾಥ್ ಚಾಟಿ

 | 
vishwanath and siddaramaiah

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್​ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಎಂಬುದರ ಕುರಿತು ಚರ್ಚಗಳು ಬಿರುಸಾಗಿ ನಡೆಯುತ್ತಿದೆ. ಇಂತ ಸಂದರ್ಭದಲ್ಲಿ ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯನಿಗಿಂತ ಡಿ.ಕೆ ಶಿವಕುಮಾರ್ ಅಥವಾ ಪರಮೇಶ್ವರ್ ಸಿಎಂ ಆಗಲಿ ಎಂದು ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಸಿಎಂ ಪಟ್ಟಕ್ಕೆ ಸಂಬಂಧಿಸಿದಂತೆ ದೆಹಲಿಯ ಹೈಕಮಾಂಡ್​ ಬಳಿಗೆ ದೂರು ಹೋಗಿದೆ. ಇದರ ಬಗ್ಗೆ ಮಾತನಾಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್​. ವಿಶ್ವನಾಥ್​, ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯನವರನ್ನ ಸಿಎಂ ಮಾಡುವುದಕ್ಕಿಂತ ಕಾಂಗ್ರೆಸ್ ನಲ್ಲಿ​ ಡಿ.ಕೆ.ಶಿ, ಖರ್ಗೆ ಹಾಗೂ ಪರಮೇಶ್ವರ್​ ಸೇರಿದಂತೆ ಅನೇಕ ನಾಯಕರಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಶಿಷ್ಯಂದಿರು ಎಲ್ಲವನ್ನೂ ಮಾತಾಡ್ತಾರೆ, ಅವರ ಶಿಷ್ಯಂದಿರು 150 ಸೀಟು ಬರತ್ತೆ ಅಂತಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆದಾಗಲೇ ಯಾಕೆ ಈ ಸಂಖ್ಯೆ 70ಕ್ಕೆ ಬಂದು ನಿಂತಿದ್ದು ಏಕೆ ಎಂದು ಅಪಹಾಸ್ಯ ಮಾಡಿದ್ದಾರೆ. 

ಸಿದ್ದರಾಮಯ್ಯನಿಗೆ ಕ್ಷೇತ್ರವೇ ಇಲ್ಲ. ಒಬ್ಬ ಮಾಜಿ ಸಿಎಂ ಇನ್ನೂ ಕ್ಷೇತ್ರದ ಹುಡುಕಾಟದಲ್ಲಿದ್ದು, ಮಾಜಿ ಸಿಎಂಗೆ ಇಂಥ ಪರಿಸ್ಥಿತಿ ಬರಬಾರದಿತ್ತು ಎಂದು ಟೀಕಿಸಿರುವ ಅವರು, ಸಿಎಂ ಸ್ಥಾನ ಉಂಡು ಬಿಸಾಡೋ ಸ್ಥಾನವಲ್ಲ. ಅದನ್ನು ಸ್ವಚ್ಚವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ಕೊಡಬೇಕು ಎಂದು ತಿಳಿಸಿದ್ದಾರೆ.