ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಆತಂಕದ ಹಿನ್ನೆಲೆ

ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಸಚಿವರ ಸೂಚನೆ

 | 
D. K sudhakar

ಬೆಂಗಳೂರು: ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿನ ಪ್ರಕರಣಗಳು ಕಂಡುಬಂದ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇರಳದಲ್ಲಿ ಶೇಕಡಾ 6ರಷ್ಟು ಅಂದರೆ 12 ಸಾವಿರದಷ್ಟು ಸೋಂಕಿತರು ಇರುವುದರಿಂದ ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಬೇಕು, ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡಿದ್ದೇನೆ ಎಂದರು.

ಅತಿ ಹೆಚ್ಚು ಟೆಸ್ಟ್ ಗಳನ್ನು ಗಡಿ ಜಿಲ್ಲೆಗಳಲ್ಲಿ ಮಾಡಬೇಕಾಗುತ್ತದೆ. ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಕೊರೋನಾ ಮೂರನೇ ಅಲೆ ಬಂದರೂ ಮಕ್ಕಳಲ್ಲಿ ತೀವ್ರತರವಾದ ವ್ಯಾಧಿ ಉಲ್ಬಣವಾಗುವುದಿಲ್ಲ ಎಂದು ಇಡೀ ವಿಶ್ವದಲ್ಲಿ ತಜ್ಞರು, ಸಂಶೋಧಕರು ಹೇಳುತ್ತಿದ್ದಾರೆ. ಇದು ಸಮಾಧಾನಕರ ಅಂಶ. ಆದರೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.