ಲಾಕ್ಡೌನ್ ಲೆಕ್ಕಿಸದೆ ಕುದುರೆ ಅಂತ್ಯಕ್ರಿಯೆಗೆ ಆಗಮಿಸಿದ ನೂರಾರು ಜನ
ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿದ ಜಿಲ್ಲಾಡಳಿತ

ಬೆಳಗಾವಿ: ರಾಜ್ಯಾದ್ಯಂತ ಕೊರೋನಾ ಹೆಚ್ಚಾಗುತ್ತಿದ್ದ ಹಿನ್ನೆಲೆ ಸರ್ಕಾರ ಲಾಕ್ಡೌನ್ ಜಾರಿ ಮಾಡಿ ಕಠಿಣ ನಿಯಮಗಳನ್ನು ವಿಧಿಸಿದೆ. ಆದರೆ, ಇದನ್ನೆಲ್ಲ ಗಾಳಿಗೆ ತೂರಿರುವ ಬೆಳಗಾವಿಯ ಮರಡಿಮಠದ ನೂರಾರು ಜನರು ಸತ್ತ ಕುದುರೆಯ ಅಂತ್ಯಕ್ರಿಯೆಗೆ ಆಗಮಿಸಿ ಕುದುರೆ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು, ಮೃತಪಟ್ಟಿರುವ ಕುದುರೆ ಸ್ಥಳೀಯ ಧಾರ್ಮಿಕ ಸಂಸ್ಥೆ ಮಸ್ತಮರಡಿಗೆ ಸೇರಿದ್ದು ಎಂದು ತಿಳಿಸಿದೆ. ವಿಷಯ ತಿಳಿದ ಜಿಲ್ಲಾಡಳಿತ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿ ಕೊರೋನಾ ಪರೀಕ್ಷೆಗಳನ್ನು ಕೈಗೊಂಡಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಮರಡಿಮಠದ ಲಾಕ್ಡೌನ್ ನಿಯಮಗಳನ್ನು ಪಾಲಿಸದೆ ಹಲವರು ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಜನರು ಬುಜಕ್ಕೆ ಬುಜ ತಾಗುವ ಅಂತರದಲ್ಲಿ ಗುಂಪು ಗುಂಪಾಗಿ ಆಗಮಿಸಿ ಮೃತ ಕುದುರೆಯ ಶವ ಸಂಸ್ಕಾರದಲ್ಲಿ ಭಾಗವಹಿಸಿದ್ದಾರೆ.
ಈ ಗ್ರಾಮವನ್ನು ಇನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಿ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಯಾರನ್ನು ಊರಿನಿಂದ ಹೊರಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಪೊಲೀಸ್ ವ್ಯವಸ್ಥಾಪಕ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.