ಕೋವಿಡ್ ಎರಡನೇ ಅಲೆಗೆ ಭಾರತದ 269 ವೈದ್ಯರು ಬಲಿ

ಸಾವಿರ ಮುಟ್ಟಿದ ವೈದ್ಯರ ಸಾವಿನ ಸಂಖ್ಯೆ

 | 
ಕೋವಿಡ್ ಎರಡನೇ ಅಲೆಗೆ ಭಾರತದ 269 ವೈದ್ಯರು ಬಲಿ

ಕೊರೋನಾ ಮೊದಲ ಅಲೆಯಲ್ಲಿ 748 ಜನ ವೈದ್ಯರು ಮೃತಪಟ್ಟಿದ್ದರು, ಎರಡನೇ ಅಲೆಗೆ ಈವರೆಗೆ 269 ಜನ ಬಲಿಯಾಗಿದ್ದು, ಕೊರೋನಾ ಮಹಾಮಾರಿಗೆ ಮೃತಪಟ್ಟ ವೈದ್ಯರ ಸಂಖ್ಯೆ ಸಾವಿರ ಮುಟ್ಟಿದೆ.

ನವದೆಹಲಿ: ಕೋವಿಡ್ 19 ಎರಡನೇ ಅಲೆ ಕಳೆದ ಎರಡು ತಿಂಗಳುಗಳಿಂದ ದೇಶದಲ್ಲಿ ವಿನಾಶವನ್ನೇ ಸೃಷ್ಟಿಸಿದೆ. ಇದರಿಂದಾಗಿ ದೇಶದ ಫ್ರಂಟ್ ಲೈನ್ ಕೋವಿಡ್ ವಾರಿಯರ್ ಗಳಾದ 269 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (IMA) ಹೇಳಿದೆ.

ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚು ವೈದ್ಯರು ಮೃತಪಟ್ಟಿದ್ದು, ಬಿಹಾರದಲ್ಲಿ 78 ವೈದ್ಯರು, ಉತ್ತರಪ್ರದೇಶದಲ್ಲಿ 37 ಹಾಗೂ ದೆಹಲಿಯಲ್ಲಿ 28 ಮಂದಿ ವೈದ್ಯರು ಕೋವಿಡ್ ಎರಡನೇ ಅಲೆಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ರಾಜ್ಯವಾರು ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಭಾರತ 748 ವೈದ್ಯರನ್ನು ಕಳೆದುಕೊಂಡಿತ್ತು, ಇದೀಗ ಎರಡನೇ ಅಲೆಯಲ್ಲಿ 269 ಮಂದಿ ಮೃತಪಟ್ಟಿದ್ದು, ಇದುವರೆಗೆ ಕೋವಡ್ ನಿಂದ ಸಾವಿರ ಮಂದಿ ವೈದ್ಯರು ಸಾವನ್ನಪ್ಪಿರುವುದಾಗಿ ಭಾರತೀಯ ವೈದ್ಯಕೀಯ ಸಂಘ (IMA) ಹೇಳಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚು ಇರಬಹುದು ವೈದ್ಯರ ಸಂಘ ಕೇವಲ 3,5 ಲಕ್ಷ ಸದಸ್ಯರ ದಾಖಲೆಗಳನ್ನು ಹೊಂದಿದೆ ಭಾರತ 12 ಲಕ್ಷಕ್ಕೂ ಹೆಚ್ಚು ವೈದ್ಯರನ್ನು ಹೊಂದಿದೆ ಎಂದು ಹೇಳಿದೆ.