11 ಜಿಲ್ಲೆಗಳ ಲಾಕ್ ಡೌನ್ ಕಠಣ ಕ್ರಮ, ಉಳಿದ ಜಿಲ್ಲೆಗಳಲ್ಲಿ ಸಡಿಳಿಕೆ: ಸಿಎಂ ಯಡಿಯೂರಪ್ಪ

 | 
BS Yediyurappa

ಬೆಂಗಳೂರು: ರಾಜ್ಯದ ಕೊರೋನಾ ಸ್ಥತಿಗತಿಗೆ ಅನುಗುಣವಾಗಿ ಸಿಎಂ ಯಡಿಯೂರಪ್ಪ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ನಿಯಮಾವಳಿಗಳನ್ನು ಮಾರ್ಪಡಿಸಿ ಪ್ರಕಟಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಇದೇ ತಿಂಗಳ 21ರವರೆಗೆ ಲಾಖ್ ಡೌನ್ ನಿಯಮಗಳು ಯಥಾಸ್ಥಿತಿ ಮುಂದುವರಿಯಲಿದೆ. ಉಳಿದ ಜಿಲ್ಲೆಗಳಲ್ಲಿ 14 ರಿಂದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ನಿಯಮಾವಳಿ ಸಡಿಲಿಕೆಯ ಬಗ್ಗೆ ವಿವರಿಸಿದರು, ಪರಿಷ್ಕೃತ ನೀತಿಯ ಪ್ರಕಾರ ರಾಜ್ಯದ 11 ಜಿಲ್ಲೆಗಳಲ್ಲಿ ಮತ್ತೆ ಪೂರ್ಣ ಪ್ರಮಾಣದ ಲಾಕ್ ಡೌನ್ ಮುಂದುವರಿಸಿದ್ದು, ಉಳಿದ 19 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ನ್ನು ಘೋಷಣೆ ಮಾಡಲಾಗಿದೆ. ಹಾಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.  

ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಲಾಕ್ ಡೌನ್ ಗೆ ಸಂಬಂಧಿಸಿದ ನಿಯಮಗಳು ಯಥಾಸ್ಥಿತಿ ಮುಂದುವರಿಲಿವೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ. 

ಉಳಿದ ಜಿಲ್ಲೆಗಳಲ್ಲಿ ಪರಿಷ್ಕೃತ ನಿಯಮಗಳು ಜೂನ್ 14 ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಜೂನ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. 

ನಿಯಮ ಸಡಿಲಿಕೆ ಮಾಹಿತಿ..

  • ಎಲ್ಲಾ ಕಾರ್ಖಾನೆಗಳನ್ನು ಶೇ. 50 ರಷ್ಟು ಸಿಬ್ಬಂದಿಯ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬಹುದು. ಆದರೆ, ಗಾರ್ಮೆಂಟ್ ಕೈಗಾರಿಕೆಗಳಿಗೆ ಮಾತ್ರ ಶೇ. 30 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಬೇಕು. 
  • ಎಲ್ಲಾ ಅಗತ್ಯ ವಸ್ತು ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. 
  • ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಹಾಗೂ ನಿಮಾಣ ಚಟುವಟಿಕೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ. 
  • ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. 
  • ಬೀದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ.
  • ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಆದ್ರೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿಗೆ ಅವಕಾಶ ಇಲ್ಲ.
  • ತುರ್ತು ಕಾರ್ಯದ ನಿಮಿತ್ತ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ.