ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮುಂದುವರಿಕೆ: ಮುಖ್ಯಮಂತ್ರಿ ಯಡಿಯೂರಪ್ಪ

ಜೂನ್ 7ರ ವರೆಗೂ ಲಾಕ್ಡೌನ್ ವಿಸ್ತರಿಸಲು ತೀರ್ಮಾನ, ಕಠಿಣ ನಿಯಮಗಳು ಮುಂದುವರಿಕೆ

 | 
BS Yediyurappa

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಇದೇ 24ರಂದು ಮುಗಿಯಲಿದ್ದ ಲಾಕ್ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ. ಮತ್ತೆ 14 ದಿನ ಲಾಕ್ಡೌನ್ ಮುಂದುವರಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಜೂನ್ 7ರವರೆಗೆ ಲಾಕ್ ಡೌನ್ ಕಠಿಣ ನಿಯಮಗಳನ್ನು ಮುಂದುವರಿಸಿವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ತಜ್ಞರ ಸಮಿತಿ ಸಲಹೆ ನೀಡಿದ ಬೆನ್ನಲೆ ಶುಕ್ರವಾರ ಸಂಜೆ ಸಚಿವರುಗಳ ಜೊತೆ ಸಭೆ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಕೋವಿಡ್ ಮಹಾಮಾರಿಯನ್ನು ಅತೋಟಿಗೆ ತರಲು ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದು ತೀರ್ಮಾನ ಕೈಗೊಂಡಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋವಿಡ್ ಹಳ್ಳಿಗಳಿಗೆ ವ್ಯಾಪಿಸಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ ಇದನ್ನು ನಿಯಂತ್ರಣಕ್ಕೆ ತರಲು ಮತ್ತೆ ಲಾಕ್ಡೌನ್ ಅನಿವಾರ್ಯ ಆದ್ದರಿಂದ ಮುಂದುವರಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ 10ಗಂಟೆ ಬಳಿಕವೂ ಜನರು ಓಡಾಡುತ್ತಿದ್ದಾರೆ. ಹೀಗಾಗಿ ಬೆ.6 ರಿಂದ 9.45ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತಿದೆ, ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಿಂದಿನ ಮಾರ್ಗಸೂಚಿಯನ್ನೇ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಕೆಲವರು ಅನಗತ್ಯವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ, ಅದಕ್ಕೆ ಅವಕಾಶವಿಲ್ಲ, ಕಠಿಣ ಲಾಕ್ಡೌನ್ ನಿಯಮವನ್ನು ಎಲ್ಲರೂ ಪಾಲಿಸಬೇಕು, ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶ ನೀಡಿಲಾಗಿದೆ, ಆದರೆ ಷರತ್ತುಗಳು ಅನ್ವಯವಾಗಲಿವೆ ಅನುಮಾತಿ ಪಡೆದು ಪ್ರಯಾಣಿಸಬೇಕು ಸರಕು ಸಾಗಾಣಿಕೆ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಠಿಣ ನಿರ್ಬಂಧ ಜಾರಿಗೊಳಿಸುವ ಅಧಿಕಾರ ಇರಲಿದೆ ಎಂದು ಪರಿಷ್ಕೃತ ಮಾರ್ಗಸೂಚಿ ತಿಳಿಸಿದೆ.