ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಗೆ ಒಂದು ಬಲಿ

ಡೆಲ್ಟಾ ರೂಪಾಂತರಿ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಬಿಗಿ ನಿಯಮ ಜಾರಿ

 | 

ಮುಂಬೈ: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ವೈರಸ್ ನಿಂದ ಮೊದಲ ಸಾವು ಸಂಭವಿಸಿದೆ. 80 ವರ್ಷದ ರತ್ನಗಿರಿ ಜಿಲ್ಲೆಯ ಮಹಿಳೆಯೊಬ್ಬರು ಡೆಲ್ಟಾ ಪ್ಲಸ್ ವೈರಸ್ ಗೆ ಬಲಿಯಾಗಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ದೇಶದಲ್ಲಿ ಒಟ್ಟು 52 ಡೆಲ್ಟಾ ರೂಪಾಂತರಿತ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 21 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿವೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರಿತ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದಾದ್ಯಂತ ಮತ್ತೆ ಬಿಗಿ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 9 ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಕಾಣಿಸಿಕೊಂಡಿವೆ. ಜಲಗಾವ್ ನಲ್ಲಿ 7 ಪ್ರಕರಣಗಳು, ಮುಂಬೈನಲ್ಲಿ 2 ಪ್ರಕರಣಗಳು, ಪಾಲ್ಘರ್, ಥಾಣೆ ಮತ್ತು ಸಿಂಧುದುರ್ಗದಲ್ಲಿ ತಲಾ ಒಂದೊಂದು ಡೆಲ್ಟಾ ಪ್ಲಸ್ ರೂಪಾಂತರಿತ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಮಹಾರಾಷ್ಟ್ರದ ಆರು ಗ್ರಾಮಗಳಲ್ಲಿ ನಿರ್ಬಂಧ ಏರಲಾಗಿದೆ.  

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಈಗಾಗಲೆ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚಿಸಿ ಬಿಗಿ ನಿಯಮಾವಳಿಯ ಹಂತಗಳ ಕುರಿತು ಟ್ವೀಟ್ ಮಾಡಿದ್ದಾರೆ.