ಆಶಾಕಾರ್ಯಕರ್ತೆಯರಿಗೆ ಮಾಸ್ಕ್, ಗ್ಲೌಸ್ ನೀಡದಿದ್ದಕ್ಕೆ ಕೃಷಿ ಸಚಿವ ತರಾಟೆ
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಬಿ.ಸಿ ಪಾಟೀಲ್

ಹಾವೇರಿ: ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್, ಸ್ಯಾನಿಟೈಜರ್ ನೀಡದ ಅಧಿಕಾರಿಗಳನ್ನು ಹಿರೇಕೆರೂರು ಮತಕ್ಷೇತ್ರದ ಶಾಸಕ ಹಾಗೂ ಕೃಷಿ ಸಚಿವರೂ ಆಗಿರುವ ಬಿ.ಸಿ.ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿರೇಕೆರೂರು ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಖಾಸಗಿ ವೈದ್ಯರ ಜೊತೆ ಕೋವಿಡ್ 19 ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಕೆಲ ಆಶಾ ಕಾರ್ಯಕರ್ತರು ಸಚಿವರ ಬಳಿ ಬಂದು ತಮಗೆ ಆರೋಗ್ಯ ಇಲಾಖೆಯಿಂದ ಯಾವುದೇ ಆರೋಗ್ಯ ಸಾಧನಗಳನ್ನು ವಿತರಿಸಿಲ್ಲ ಎಂದು ಅಳಲ ಹಂಚಿಕೊಂಡರು.
ಈ ವೇಳೆ ಆಶಾಕಾರ್ಯಕರ್ತೆಯರ ಸಮಸ್ಯೆ ಆಲಿಸಿದ ಬಿ.ಸಿ.ಪಾಟೀಲರು, ತಾಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡವರು. ಕೊರೊನಾ ಸೋಂಕನ್ನೂ ಲೆಕ್ಕಿಸದೇ ಆಶಾಕಾರ್ಯಕರ್ತರು ಮನೆಮನೆಗೆ ತೆರಳಿ ಜನರಿಗೆ ಆರೋಗ್ಯದ ಅರಿವು ಹಾಗೂ ಸೋಂಕಿತರ ಮಾಹಿತಿ ಪಡೆಯುತ್ತಿದ್ದಾರೆ. ಕೊರೋನಾ ಸೇವೆಯಲ್ಲಿ ಮುಂಚೂಣಿಯಲ್ಲಿ ದುಡಿಯುತ್ತಿದ್ದಾರೆ. ಇಂತವರಿಗೆ ಜಿಲ್ಲಾ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್ ಪೂರೈಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇದೆಲ್ಲವನ್ನು ಬಳಸಬೇಕು ಎಂದು ನಾವೇ ಹೇಳುತ್ತೇವೆ. ಅದನ್ನೇ ಪೂರೈಸದಿದ್ದರೆ ಹೇಗೆ? ನಿಜಕ್ಕೂ ಇದು ಗಂಭೀರ ವಿಚಾರ. ತಾಲೂಕು ಜಿಲ್ಲಾಡಳಿತ ಇಲಾಖೆ ಎಂದು ಅವರಿವರ ಮೇಲೆ ನೆಪ ಸಬೂಬು ಹೇಳದೇ ಈ ಕೂಡಲೇ ಅವರಿಗೆ ಇದೆಲ್ಲವನ್ನೂ ಪೂರೈಸಬೇಕು. ಇಂತಹ ಅಸಡ್ಡೆತನವನ್ನು ತಾವೆಂದೂ ಸಹಿಸುವುದೂ ಇಲ್ಲ. ಇಂತಹ ಬೇಜವಾಬ್ದಾರಿ ನಡವಳಿಕೆ ಸರಿಯೂ ಅಲ್ಲ ಎಂದು ತಾಕೀತು ಮಾಡಿದರು.