ಧಾರವಾಡದಲ್ಲಿ ಗಮನ ಸೆಳೆಯುತ್ತಿವೆ ವೈರಸ್ ಮಾದರಿ ಹೂವುಗಳು
ಕೊರೊನಾ ಹೂ ಎಂದೇ ಕರೆಯಲು ಶುರು ಮಾಡಿದ ಧಾರವಾಡದ ಜನರು

ಧಾರವಾಡ: ಕೊರೊನಾ ವೈರಸ್ ಗೋಲಾಕಾರದಲ್ಲಿರುತ್ತೆ ಅದರ ಮೈತುಂಬ ಮುಳ್ಳು ಮುಳ್ಳಿನ ಆಕೃತಿ ಹೊಂದಿರುತ್ತದೆ ಎಂಬುದು ನಮ್ಮ ಕಲ್ಪನೆ. ಆ ವೈರಸ್ ಹೀಗಿರಬಹುದು ಎಂದು ಚಿತ್ರ ಬಿಡಿಸಿ, ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಮನುಷ್ಯ ತನ್ನ ಕಲ್ಪನೆಯಲ್ಲಿ ಚಿತ್ರಿಸಲಾದ ವೈರಸ್ ಮಾದರಿಯ ಹೂವುಗಳು ಧಾರವಾಡದಲ್ಲಿ ಅರಳಿ ಎಲ್ಲರ ಗಮನಸೆಳೆಯುತ್ತಿವೆ.
ಈ ಹೂವಿಗೆ ಥಂಡರ್ ಲಿಲ್ಲಿ ಎಂದು ಕರೆಯುತ್ತಾರೆ. ಇದಕ್ಕೆ ಕನ್ನಡದಲ್ಲಿ ಯಾವುದೇ ಹೆಸರಿಲ್ಲದಿದ್ದರೂ ಇದರ ಆಕಾರ ನೋಡಿ ಬೆಂಕಿ ಹೂ, ಬೆಂಕಿ ಚೆಂಡು, ಮೇ ಪ್ಲಾವರ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳನ್ನು ನೋಡಿದ ಜನ ಇದೇನು ಕೊರೊನಾ ವೈರಸ್ ನಂತೆಯೇ ಇದೆಯಲ್ಲ ಎನ್ನುತ್ತಿದ್ದಾರೆ.
ಧಾರವಾಡದ ಮಾಳಮಡ್ಡಿ ಏರಿಯಾದಲ್ಲಿರುವ ಕುಲಕರ್ಣಿ ಕಂಪೌಂಡ್ ಒಂದರಲ್ಲೇ ಸಾವಿರಾರು ಹೂವುಗಳು ಅರಳಿ ನಿಂತಿವೆ. ಭೂಮಿಯ ಒಳಭಾಗದಲ್ಲಿ ಬಚ್ಚಿಟ್ಟುಕೊಂಡಂತೆ ಇರೋ ಗಡ್ಡೆಗಳು ಮೊದಲ ಮಳೆಯ ಬಳಿಕ ಒಂದೊಂದಾಗಿ ಹೊರಗೆ ಬರುತ್ತವೆ. ಇಲ್ಲಿರೋದು 30-40 ವರ್ಷಗಳಷ್ಟು ಹಳೆಯ ಗಡ್ಡೆಗಳು ಅಂದ್ರೆ ನೀವು ನಂಬಲೇಬೇಕು. ಇನ್ನೊಂದು ವಿಚಿತ್ರ ಅಂದ್ರೆ, ಈ ಹೂವಿನ ಗಡ್ಡೆ ಮೇಲಕ್ಕೆ ಬಂದ ತಕ್ಷಣವೇ ಮೊದಲು ಹೂವು ಬಿಡುತ್ತದೆ ಹೂವು ದೊಡ್ಡದಾದ ಬಳಿಕ ಎಲೆಗಳು ಬರುತ್ತವೆ.
ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯ ಭಾರತಕ್ಕೆ ಬಂದಿದ್ದೇ ಬಲು ಅಚ್ಚರಿಯ ಸಂಗತಿ. ಬ್ರಿಟೀಷರು ತಮ್ಮ ಮನೆಯ ಮುಂದಿನ ಉದ್ಯಾನವನಗಳಲ್ಲಿ ಬೆಳೆಸಲು ಈ ಅಲಂಕಾರಿಕ ಸಸ್ಯವನ್ನು ತರಿಸಿಕೊಂಡಿದ್ದರು. ಅದು ಹಾಗೆಯೇ ಮನೆಯಿಂದ ಮನೆಗೆ ಸಾಗಿ ಇವತ್ತು ಧಾರವಾಡದ ತುಂಬೆಲ್ಲಾ ತನ್ನ ಬೇರನ್ನು ಬಿಟ್ಟಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಳೆ ಆರಂಭವಾಗೋದ್ರಿಂದಾಗಿ ಇದು ಅವಾಗಲೇ ಹೂವನ್ನು ಬಿಡುತ್ತೆ. ಇದೇ ಕಾರಣಕ್ಕೆ ಇದಕ್ಕೆ ಮೇ ಫ್ಲಾವರ್ ಅಂತಾನೂ ಕರೆಯಲಾಗುತ್ತೆ. ಆದರೆ ವಿಚಿತ್ರವೆಂದರೆ ಮೊದಲ ಮಳೆ ಬಿದ್ದ ಮೇಲೆಯೇ, ಅದೂ ಗುಡುಗಿನ ಶಬ್ದ ಕೇಳುತ್ತಲೇ ಇದು ಹೊರಗೆ ಬರುತ್ತೆ. ಇದಕ್ಕೆ ಕಾರಣ ಈ ಸಸ್ಯ ಗುಡುಗು ಸಂವೇದಿಯಾಗಿರೋದು.
ಸುಮಾರು ಒಂದು ವಾರದವರೆಗೆ ಇರೋ ಹೂವು ಬಳಿಕ ಒಣಗಿ ಹೋಗುತ್ತೆ. ಆದರೆ ವನದ ತುಂಬೆಲ್ಲಾ ಹಸಿರೆಲೆಯನ್ನು ಉಳಿಸಿಕೊಂಡ ಗಡ್ಡೆ ಮಾತ್ರ ನೆಲದೊಳಗೆ ಹಾಗೆಯೇ ವರ್ಷಾನುಗಟ್ಟಲೆ ಭೂಗತವಾಗಿ ಬದುಕುಳಿಯುತ್ತೆ. ಹೊರಗಡೆ ಮಾತ್ರ ಸಸ್ಯ ಮೇಲ್ನೋಟಕ್ಕೆ ಒಣಗಿ ಹೋದಂತೆ ಕಂಡರೂ ಭೂಮಿಯ ಒಳಗಡೆ ಗಡ್ಡೆಯ ರೂಪದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತೆ. ಸದ್ಯಕ್ಕಂತೂ ಈ ಹೂವಿಗೆ ಧಾರವಾಡ ಜನ ಕೊರೊನಾ ವೈರಸ್ ಹೂವೆ ಎಂದು ಕರೆಯೋಕೆ ಶುರು ಮಾಡಿ ಬಿಟ್ಟಿದ್ದಾರೆ.