ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಚಾರಿ ವಿಜಯ್ ಅಂತ್ಯಕ್ರಿಯೆ
ಗೆಳೆಯನ ತೋಟದಲ್ಲಿ ಸಂಚಾರಿಯ ಅಂತಿಮ ಸಂಸ್ಕಾರ
ಚಿಕ್ಕಮಗಳೂರು: ಬೈಕ್ ಅಪಘಾತದಿಂದ ಮೃತರಾಗಿದ್ದ ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಪಂಚನಹಳ್ಳಿಯ ಸಮೀಪದಲ್ಲಿರುವ ವಿಜಯ್ ಅವರ ಸ್ನೇಹಿತ ರಘು ಅವರ ತೋಟದಲ್ಲಿ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತಿಮ ಸಂಸ್ಕಾರ ನೆರವೇರಿತು.
ಶಿವಾಚಾರ್ಯ ಶ್ರೀಗಳ ನಿರ್ದೇಶನದಂತೆ ವಿಜಯ್ ಅವರ ಸಹೋದರರು ಅಂತಿಮ ವಿಧಿವಿಧಾನ ನೆರವೇರಿಸಿದರು. ಸಮಾಧಿ ಜಾಗಕ್ಕೆ ಬಿಲ್ವಪತ್ರೆ ವಿಭೂತಿ ಹಾಕಿ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಪೂಜೆ ಸಲ್ಲಿಸಲಾಯಿತು.
ಅಂಸಂಸ್ಕಾರಕ್ಕೂ ಮುನ್ನ ಸಮಾಧಿ ಸ್ಥಳದಲ್ಲೇ ಸ್ಥಳೀಯರು ಸ್ನೇಹಿತರು ಮತ್ತು ಬಂಧು ಮಿತ್ರರಿಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೋವಿಡ್ ನಿರ್ಬಂಧದ ನಡುವೆಯೂ ನೂರಾರು ಜನರು ಆಗಮಿಸಿ ವಿಜಯ್ ಅವರ ಪಾರ್ಥಿವ ಶರರದ ಅಂತಿಮ ದರ್ಶನ ಮಾಡಿದರು.