ಸಿಎಂ ನಿರ್ಲಕ್ಷ್ಯಕ್ಕೆ ಕೊರೋನಾದಿಂದ ಹೆಚ್ಚು ಜನ ಸಾವನ್ನಪ್ಪಿದರು: ಸಿದ್ದರಾಮಯ್ಯ
ಕೊರೊನಾ ಬರುತ್ತದೆ ಎಂದು ಗೊತ್ತಿದ್ದರೂ ನಿರ್ಲಕ್ಷ್ಯ ಮಾಡಿದರು ಎಂದ ಮಾಜಿ ಸಿಎಂ
ಕೊಪ್ಪಳ: ಸಿಎಂ ಯಡಿಯೂರಪ್ಪ ಅವರು ನಿರ್ಲಕ್ಷ್ಯದಿಂದ ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಸಾವು ಸಂಭವಿಸಿವೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೊರೊನಾ ಬರುತ್ತದೆ ಎಂದು ಗೊತ್ತಿದ್ದರೂ ನಿರ್ಲಕ್ಷ್ಯ ಮಾಡಿದರು. ಇದರಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ ಹೆಚ್ಚು ಸಾವು ಸಂಭವಿಸುತ್ತಿರಲಿಲ್ಲ. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಸಿಗದೆ ಸತ್ತರು. ಅವರಿಗೆ ಸರ್ಕಾರ ಆಕ್ಸಿಜನ್ ಕೊಟ್ಟಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಸರ್ಕಾರ ಬರೀ ಹಣ ಲೂಟಿ ಮಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಇದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ಅಪ್ಪ ಮಗ ಸೇರಿಕೊಂಡು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಯತ್ನಾಳ, ಬೆಲ್ಲದ್, ವಿಶ್ವನಾಥ್ ಮತ್ತು ಯೋಗೇಶ್ವರ್ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಾಮರಾಜನಗರ ದುರಂತದ ಬಗ್ಗೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಸಿದೆ. ಆದರೆ, ತನಿಖೆ ಮಾಡಿಸಲಿಲ್ಲ. ಅರವಿಂದ ಬೆಲ್ಲದ ಫೋನ್ ಟ್ಯಾಪಿಂಗ್ ಪ್ರಕರಣ ಕೂಡ ತನಿಖೆಯಾಗಬೇಕು. ಇನ್ನೊಬ್ಬರ ಫೋನ್ ಕದ್ದಾಲಿಕೆ ಮಾಡೋ ಅಧಿಕಾರ ಯಾರಿಗೂ ಇಲ್ಲ. ಇದು ಗಂಭೀರವಾದ ವಿಚಾರ, ಯಾವುದೇ ಪಕ್ಷದವರಾಗಲಿ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡೋ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.