ಮೊದಲು ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು: ಸಿದ್ದರಾಮಯ್ಯ

ಲೈಂಗಿಕ ಹಗರಣ ಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು

 | 
siddharamaiah

ಬೆಂಗಳೂರು:  ರಮೇಶ್ ಜಾರಿಕಿಹೊಳಿ ಲೈಂಗಿಕ ಹಗರಣವನ್ನು ಹೈಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಆರೋಪಿಯನ್ನು ಮೊದಲು ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಬೆಳಕಿಗೆ ಬಂದು ಮೂರು ತಿಂಗಳುಗಳಾಗಿವೆ. ಅವರನ್ನು ಬಂಧಿಸಿಲ್ಲ, ರಮೇಶ್ ಜಾರಕಿಹೊಳಿ ಅರೆಸ್ಟ್ ಮಾಡದೇ ಇದ್ರೆ ಮಹಿಳೆಯರಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂಬುದು ಗೊತ್ತಾಗುತ್ತದೆ. ರಮೇಶ್ ಜಾರಕಿಹೊಳಿಯವರ ಜೊತೆಗೆ ಅವರ ರಕ್ಷಣೆಗೆ ನಿಂತಿರುವ ಸಚಿವರ ಬಗ್ಗೆಯೂ ತನಿಖೆಯಾಗಬೇಕು ಎಂದರು.

ಈ ಪ್ರಕರಣವು ರಮೇಶ್ ಜಾರಕಿಹೊಳಿ ಮಹಿಳೆಯ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಕೆಲಸ ಕೊಡಿಸುವುದಾಗಿ ಲೈಂಕಿವಾಗಿ ಬಳಸಿಕೊಂಡಿದ್ದಾರೆ ಎಂದು ಮಹಿಳೆಯ ಹೇಳಿಕೆಯಲ್ಲಿದೆ. ಕಾನೂನು ಪ್ರಕಾರ ರಮೇಶ್ ಜಾರಕಿಹೊಳಿ ಕೂಡಲೇ ಅರೆಸ್ಟ್ ಆಗಬೇಕಿತ್ತು. ದೇಶದಲ್ಲಿ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡದೇ ಇರುವುದು ಇದೇ ಕೇಸ್ ನಲ್ಲಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.

ನನಗಿರುವ ಮಾಹಿತಿ ಪ್ರಕಾರ ಆರೋಪಿ ಸ್ಥಾನದಲ್ಲಿರುವ ರಮೇಶ ಜಾರಕಿಹೊಳಿ ಗೃಹ ಸಚಿವರನ್ನು ಭೇಟಿ‌ ಮಾಡಿ ಪ್ರಕರಣ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಹ್ಲಾದ್ ಜೋಶಿರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ. ಒಬ್ಬ ಅತ್ಯಾಚಾರದ ಆರೋಪಿ ಗೃಹ ಸಚಿವರನ್ನು ಭೇಟಿ ಮಾಡಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಾರಂಭದಲ್ಲಿ ವಿಡಿಯೋ ಫೇಕ್ ಎಂದು ಹೇಳಿದ್ದರು. ಇದೀಗ ವಿಡಿಯೋದಲ್ಲಿ ಇರುವುದು ನಾನೇ ಎಂದು ಹೇಳಿದ್ದಾರೆ. ಅದು ನಾನು, ನಾನೇ - ಅವಳು, ಅವಳೇ ಎಂದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.